ವಕೀಲರ ಸಂಘದ ಉಪಾಧ್ಯಕ್ಷ ಮುತ್ತುರಾಜ್ ಗೆ ಸನ್ಮಾನ

ಯಳಂದೂರು: ತಾಲೂಕು ವಕೀಲರ ಸಂಘದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಎಂ.ಮುತ್ತುರಾಜು ಬೂದಿತಿಟ್ಟು ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು.

ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರೈತ, ದಲಿತ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಮುಖಂಡರು ಭಾಗವಹಿಸಿ ವಕೀಲ ಎಂ.ಮುತ್ತುರಾಜು ಬೂದಿತಿಟ್ಟು ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ, ಪೇಟ ತೊಡಿಸಿ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡ ಬಸವನಪುರ ರಾಜಶೇಖರ್, ಮುತ್ತುರಾಜು ಅವರು ವಕೀಲರಾಗಿ ಪ್ರಸಿದ್ಧರಾಗಿರುವುದರ ಜೊತೆಗೆ ರೈತರು, ಬಡವರು, ದೀನದಲಿತರ ಪರ ಒಲವುಳ್ಳವರು. ಅಸಹಾಯಕರಾಗಿ ನ್ಯಾಯದ ನಿರೀಕ್ಷೆ ಇಟ್ಟುಕೊಂಡು ಬರುವ ಬಡವರಿಗೆ ಉಚಿತವಾಗಿ ಕಾನೂನು ನೆರವು ಒದಗಿಸಿ ಸಹಾಯ ಮಾಡಿದ್ದಾರೆ. ಇಂತಹ ಹೃದಯ ವೈಶಾಲ್ಯತೆಯುಳ್ಳ ಮುತ್ತುರಾಜು ಅವರನ್ನು ಸನ್ಮಾನಿಸಬೇಕಾಗಿರುವುದು ಸಂಘಟನೆಗಳ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ನಾವೆಲ್ಲರೂ ಇಂದು ಇವರಿಗೆ ಸನ್ಮಾನಿಸಿದ್ದೇವೆ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಮುತ್ತುರಾಜು ಬೂದಿತಿಟ್ಟು, ಸುಮಾರು ಹದಿನಾರು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಕಾಯಾ ವಾಚಾ ಮನಸಾ ಸೇವಾಪರನಾಗಿ ವೃತ್ತಿಯಲ್ಲಿ ಸಾಗಿದ್ದು, ಎರಡು ಬಾರಿ ಯಳಂದೂರು ವಕೀಲರ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶವೂ ನನಗೆ ಒದಗಿ ಬಂದಿದೆ. ಇಂದು ಪ್ರಗತಿಪರ ಸಂಘಟನೆಗಳು ನನ್ನನ್ನು ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದೆಯೂ ಸಹ ವಕೀಲಿ ವೃತ್ತಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಅಸಹಾಯಕರ ಬೆನ್ನೆಲುಬಾಗಿ ನಿಲ್ಲುವ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡ ಆಲೂರು ಮಲ್ಲು, ವಕೀಲರಾದ ಗೌಡಹಳ್ಳಿ ಮಹೇಶ್, ಗಂಗಾಧರ್, ವಿವಿಧ ಸಂಘಟನೆಗಳ ಮುಖಂಡರಾದ ಶಂಕರಪ್ಪ, ಮರಪ್ಪ, ಮಹದೇವಪ್ಪ, ಕುಮಾರ್ ಮಧುವನಹಳ್ಳಿ, ಗಿರೀಶ್ ಕುಮಾರ್, ಮಧುಸೂದನ್, ರಾಜು, ಗುರುಪ್ರಸಾದ್, ರಾಜೇಂದ್ರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *