

ಅಮ್ಮ ಎಂದರೆ ಏನೋ ಹರುಷವೋ….. ನಮ್ಮ ಪಾಲಿಗೆ ಅವಳೇ ದೈವವು:

ಅಮ್ಮ" ಎಂಬ ಎರಡಕ್ಷರದಲ್ಲಿ ಏನೆಲ್ಲಾ ಅಡಗಿದೆ. ದುಡ್ಡು ಕೊಟ್ಟರೆ ಬೇಕಾದಷ್ಟು ಈ ಜಗದಲಿ ಸಿಗುತ್ತದೆ. ಆದರೆ ಹೆತ್ತ ತಾಯಿಯನ್ನು ಕಳೆದುಕೊಂಡ ಮೇಲೆ ಅವಳು ಮತ್ತೆ ಸಿಗುವುದೇ ಇಲ್ಲ!.
ʼಅಮ್ಮ ಎಂದರೆ ಮೈ-ಮನವೆಲ್ಲಾ ಹೂವಾಗುವುದಮ್ಮʼ ಎಂಬ ಸಿನಿಮಾ ಹಾಡನ್ನು ನಾವು ಕೇಳಿದ್ದೇವೆ. ಚಲನಚಿತ್ರಗಳಲ್ಲೂ ಕೂಡ ಅಮ್ಮನ ಕುರಿತು ಹಾಡುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹೆಚ್ಚಾಗಿ ಸಿಗುತ್ತವೆ. ಜೊತೆಗೆ ಅಮ್ಮನ ಬಗ್ಗೆ ಅನೇಕ ವಿಫಲವಾದ ಸಾಹಿತ್ಯವು ಕೂಡ ಬಂದಿವೆ. ಅಮ್ಮನ ಬಗ್ಗೆ ಜಾನಪದ ಗೀತೆಗಳು, ಭಾವಗೀತೆಗಳು ಕೂಡ ಇವೆ.
ಈ ರೀತಿಯ ಹಾಡುಗಳನ್ನು, ಪದಗಳನ್ನು ಅಮ್ಮನ ಬಗ್ಗೆ ಕೇಳುತ್ತಾ ಹೋದರೆ ಮೈಮನಗಳು ರೋಮಾಂಚನಗೊಳ್ಳುತ್ತವೆ. ಮಾತೆ, ಜನನಿ, ಜನ್ಮದಾತೆ, ತಾಯಿ, ಅವ್ವ, ಎಂದೆಲ್ಲಾ ಕರೆಸಿಕೊಳ್ಳುವ "ಅಮ್ಮ" ಎಂದರೆ ಜಗತ್ತಿನ ಅದ್ಭುತ ಶಕ್ತಿ.
ಜಗತ್ತಿನಲ್ಲಿ ಅಮ್ಮನಿಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ. ತಾಯಂದಿರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರವನ್ನು ಅಮ್ಮಂದಿರ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ತಾಯಂದಿರ ತ್ಯಾಗ, ಪ್ರೀತಿಗೆ ಬೆಲೆ ಕಟ್ಟುವುದು ಕಷ್ಟ. ತಾಯಂದಿರಿಗೆ ಕೃತಜ್ಞತೆ, ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಮ್ಮಂದಿರಿಗೆ ವಿಶೇಷ ಉಡುಗೊರೆ ನೀಡುವುದು, ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು, ಅವರಿಷ್ಟದ ಜಾಗಕ್ಕೆ ಪಿಕ್‌ನಿಕ್ ಕರೆದುಕೊಂಡು ಹೋಗುವುದು ಹೀಗೆ ಅವರಿಗೆ ಇಷ್ಟವಾಗುವಂತೆ ದಿನ ಕಳೆಯವ ಮೂಲಕ ಅರ್ಥಪೂರ್ಣವಾಗಿ ಆಚರಿಸಬಹುದು.
ಇವೆಲ್ಲವನ್ನೂ ನಾವು ಮಾಡಲೇಬೇಕು ಎಂದೇನೂ ಇಲ್ಲ. ಅವರು ಬದುಕಿರುವವರಿಗೆ ಅವರ ಬೇಕು ಬೇಡಗಳನ್ನ ನಾವು ಮುತುವರ್ಜಿ ವಹಿಸಿ ನೋಡಿಕೊಂಡರೆ ಸಾಕು. ಅದೇ ಅವರ ಸೇವೆ ಮಾಡಿದಂತೆ. ಮಕ್ಕಳ ಪ್ರತಿಯೊಂದು ತಪ್ಪನ್ನು ತಿದ್ದಿ, ತೀಡಿ, ಕೈಹಿಡಿದು ಮುನ್ನಡೆಸುವ ಕಣ್ಣಿಗೆ ಕಾಣುವ ದೇವತೆ ನಮ್ಮಮ್ಮ. ಮಾತಾಪಿತರನ್ನು ಬಳಲಿಸಿದ ಮಗ ಯಾತ್ರೆಯ ಮಾಡಿದರೇನು ಫಲ ಎಂಬ ಮಾತು ಕೂಡ ಇದೆ.
ನನ್ನಮ್ಮ ಅಪ್ಪಣ್ಣೇಗೌಡರ ಹಿರಿ ಮಗಳು "ಸೌಭಾಗ್ಯಮ್ಮ" (ಅಂತರ ಸಂತೆ ಗ್ರಾಮದವರು.) ನಮ್ಮ ಮರಿಗೌಡರ ಕುಟುಂಬದಲ್ಲಿ ತನ್ನದೇ ಆದ ಹೆಸರು ಪಡೆದವರು. ನನ್ನ ತಂದೆಯಾದ ದಿವಂಗತ ಕೆ ಎಂ ವೀರಭದ್ರಯ್ಯ (ಪ್ರೌಢಶಾಲಾ ಶಿಕ್ಷಕರಾಗಿದ್ದರು)ರವರ ಪತ್ನಿಯಾಗಿ ನಮ್ಮ ಎಚ್ ಡಿ ಕೋಟೆ ತಾಲೂಕು (ಈಗ ಸರಗೂರು ತಾಲೂಕು ಆಗಿದೆ) ಕಾಳಿಹುಂಡಿಗೆ ಬಂದಾಗಿನಿಂದ ಇವತ್ತಿನವರೆಗೂ ಕೂಡ ಸರಳ ಸಜ್ಜನಿಕೆಯಿಂದ ಬದುಕಿದವರು. ನನ್ನ ಗಂಡ ಶಿಕ್ಷಕರು ಅವರಿಗೆ ಕೈ ತುಂಬಾ ಸಂಬಳ ಬರುತ್ತದೆ ನಾನು ಬೇಕಾದುದ್ದನ್ನು ಕೊಂಡುಕೊಳ್ಳಬಹುದು. ಇಂತಹ ಕನಿಷ್ಠ ವಿಷಯವು ಕೂಡ ಅರಿಯದವರು. ಎಲ್ಲರಂತೆ ಸರಳವಾಗಿ ಬದುಕಿದರು. ಆ ನಡೆ ಇವತ್ತಿನವರೆಗೂ ಕೂಡ ಅವರನ್ನ ಕಾಪಾಡಿಕೊಂಡು ಬರುತ್ತಿದೆ. ಯಾರೊಬ್ಬರಿಗೂ ಕೂಡ ನೋಯಿಸದೆ ತನ್ನ ಮಕ್ಕಳಿಗಿಂತಲೂ ಕೂಡ ಇತರ ಮಕ್ಕಳನ್ನು ಪ್ರೀತಿಸಿದವರು, ಚೆನ್ನಾಗಿ ನೋಡಿಕೊಂಡವರು ನನ್ನ ಅಮ್ಮ "ಸೌಭಾಗ್ಯಮ್ಮ".
ಸಾಂಕೇತಿಕವಾಗಿ ವಿಶ್ವ ಅಮ್ಮಂದಿರ ದಿನವನ್ನು ಆಚರಿಸುತ್ತಾರೆ. ಆದರೆ ಈ ಜನ್ಮದಲ್ಲಿ ನಾವು ಅಮ್ಮನ ಋಣವನ್ನ ತೀರಿಸಲು ಸಾಧ್ಯವೇ ಇಲ್ಲ. ಏನೋ ಒಂದು ದಿನ ಅಮ್ಮನನ್ನ ಕಾಳಜಿಯಿಂದ ನೋಡಿಕೊಂಡು, ಕೇಕ್ ಕಟ್ ಮಾಡಿಸಬಹುದು ಅಷ್ಟೇ. ಆದರೆ ಯಾವುದೇ ನಿರೀಕ್ಷೆಯಿಲ್ಲದೆ ತನ್ನ ಪ್ರೀತಿಯನ್ನ ಧಾರೆ ಎರೆಯುವ, ಅಮ್ಮ ತಾನು ಎಷ್ಟೇ ನೊಂದರು, ಬೆಂದರು ಕೂಡ ತನ್ನ ಮಕ್ಕಳಿಗೆ ಅದ್ಯಾವುದೋ ಸೋಕಬಾರದು ಎಂದು ಕಷ್ಟಪಟ್ಟು ಮಕ್ಕಳನ್ನು ಸಾಕುತ್ತಾರೆ.
ಆದರೆ ಇಂದು ಹೆತ್ತ ತಾಯಿಯನ್ನೇ ದೂರ ಮಾಡುವ ಮಕ್ಕಳು ಕೂಡ ನಮ್ಮ ಸಮಾಜದಲ್ಲಿ ಇದ್ದಾರೆ ಎಂದರೆ ನಂಬಲು ಅಸಾಧ್ಯ. ನಮ್ಮ ಸಮಾಜದಲ್ಲಿ ತಾಯಿಗೆ ತನ್ನದೇ ಆದ ಮಹತ್ವದ ಸ್ಥಾನ ಇದೆ. ಎಷ್ಟೋ ಮಕ್ಕಳು ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿರುತ್ತಾರೆ. ಅವರಿಗೆ ತಾಯಿ ಪ್ರೀತಿ ಎನ್ನುವುದೇ ಗೊತ್ತಾಗಿರುವುದಿಲ್ಲ.
ಇಂತಹ ಸಂದರ್ಭದಲ್ಲಿ ಇರುವ ತಾಯಿಯನ್ನು ನಾವು ಸುಖವಾಗಿ ನೋಡಿಕೊಳ್ಳಬೇಕು. ಅದರಲ್ಲೂ ವಯಸ್ಸಾದ ಸಮಯದಲ್ಲಿ ತಾಯಿಯನ್ನ ಮತ್ತಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅವ್ವ ಭಾವಕೋಶದ ಜೀವ. ಇದರಿಂದಾಗಿ ಅವ್ವನ ಮಹಾ ತ್ಯಾಗವನ್ನ ಮರೆಯಲು ಸಾಧ್ಯವೇ?!.
ನಮ್ಮ ತಂದೆಗೆ ಮೂರು ಜನ ಗಂಡು ಮಕ್ಕಳು, ಒಬ್ಬಳು ತಂಗಿ. (ಶಿವಕುಮಾರ್, ಚಂದ್ರಪ್ರಭು, ರಾಘವೇಂದ್ರ, ಸುಗುಣ) ಇವರುಗಳಲ್ಲಿ ನನ್ನನ್ನು ಕಂಡರೆ ಬಹಳ ಪ್ರೀತಿ ಏಕೆಂದರೆ ನಾನು ಹಿರಿಯ ಮಗ ನನ್ನ ಹಿಂದೆ ಎರಡು ಮೂರು ಮಕ್ಕಳು ಸತ್ತು ಹೋದರಂತೆ. ನಾನು ಹುಟ್ಟಿದಾಗ ಈ ಮಗು ಕೂಡ ಏನಾಗುತ್ತದೋ ಎನ್ನುವ ಶಂಕೆ ಅವರನ್ನು ಕಾಡಿತ್ತು. ಅದರಿಂದಾಗಿ ನನ್ನನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಂಡರಂತೆ. ನಾನು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಹುಟ್ಟಿದೆ. ಆಸ್ಪತ್ರೆಗೆ ಸೇರಿಸಿದ ದಿನದಿಂದಲೇ ನಮ್ಮ ತಂದೆಗೆ ಒಂದು ರೀತಿಯಲ್ಲಿ ಆತಂಕ ಶುರುವಾಗಿತ್ತು. ಅವರು ನಿದ್ದೆಗೆಟ್ಟು ಆಸ್ಪತ್ರೆಯ ಮುಂಭಾಗದ ಪಾರ್ಕ್ ನಲ್ಲಿ ಅಂದು ಕಳೆದರು. ನಂತರದಲ್ಲಿ ಒಂದು ವರ್ಷ ಕಳೆಯುವವರೆಗೂ ಕೂಡ ನೆಲದಲ್ಲಿ ನನ್ನನ್ನು ಆಟವಾಡಲು ಬಿಡುತ್ತಿರಲಿಲ್ಲವಂತೆ ಆ ರೀತಿ ಬಹಳ ಪ್ರೀತಿಯಿಂದ ಸಾಕಿದರು. ಅದರಿಂದಾಗಿ ನನಗೆ ನಮ್ಮ ತಾಯಿ ಹೆಚ್ಚು ಪ್ರೀತಿಯನ್ನು ತೋರಿಸಿದರು.
ಈಗ ನಮ್ಮ ತಂದೆ ಇಲ್ಲದಿದ್ದರೂ ಕೂಡ ಈಗ ತಾಯಿಯೇ ತಂದೆ ಸ್ಥಾನದಲ್ಲಿ ನಿಂತು, ನಮ್ಮನ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಮಿಗಿಲಾಗಿ ನಮ್ಮ ಒಟ್ಟು ಕುಟುಂಬದಲ್ಲಿ ನಮ್ಮ ತಾಯಿಗೆ ಸುಖವಾಗಿ ಇದ್ದಾರೆ.
ಮದರ್ಸ್ ಡೇ ಬಗ್ಗೆ ಒಂದಿಷ್ಟು ಮಾಹಿತಿ........ ವರ್ಷದಲ್ಲಿ 2 ಬಾರಿ ಆಚರಿಸಲಾಗುವ ಅಂಕಿ ಅಂಶಗಳು ಇವೆ.
ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಸಾಮಾನ್ಯವಾಗಿ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಅದಾಗ್ಯೂ ಕೆಲವು ದೇಶಗಳಲ್ಲಿ ಇದನ್ನು ಮಾರ್ಚನ್‌ನಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ, ಭಾರತ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಮೇ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸುತ್ತವೆ. ಆದರೆ, ಯುನೈಟೆಡ್ ಕಿಂಗ್‌ಡಮ್, ಕೋಸ್ಟರಿಕಾ, ಜಾರ್ಜಿಯಾ, ಸಮೋವಾ ಮತ್ತು ಥೈಲ್ಯಾಂಡ್‌ನಲ್ಲಿ ಈಸ್ಟರ್ ಭಾನುವಾರದ ಮೂರು ವಾರಗಳ ಮೊದಲು ತಾಯಿಯ ದಿನವನ್ನು ಆಚರಿಸಲಾಗುತ್ತದೆ.
ಇತ್ತೀಚಿನ ಕಥೆಯ ಪ್ರಕಾರ ಇದು ಜೂಲಿಯಾ ವಾರ್ಡ್ ಹೋವ್ ಹಾಗೂ ಅನ್ನಾ ಜಾರ್ವಿಸ್ ಅವರ ಕಥೆಯನ್ನು ಹೇಳುತ್ತದೆ. ಇದು ಅಮೆರಿಕದಲ್ಲಿ ತಾಯಂದಿರ ದಿನದ ಆಚರಣೆಯ ಕಥೆಯನ್ನು ವಿವರಿಸುತ್ತದೆ. 1870 ರಲ್ಲಿ, ಜೂಲಿಯಾ ವಾರ್ಡ್ ಹೋವ್ ಅವರು ತಾಯಿಯ ದಿನವನ್ನು ವಾರ್ಷಿಕವಾಗಿ ಆಚರಿಸಲು ಕರೆ ನೀಡಿದರು. ಜೂಲಿಯೆಟ್ ಕ್ಯಾಲ್ಹೌನ್ ಬ್ಲೇಕ್ಲಿ 1800 ರ ದಶಕದಲ್ಲಿ ಮಿಚಿಗನ್‌ನ ಅಲ್ಬಿಯಾನ್‌ನಲ್ಲಿ ತಾಯಂದಿರ ದಿನವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಆ ದಿನದಂದು ತಮ್ಮ ತಾಯಂದಿರನ್ನು ಗೌರವಿಸಲುವಾಗಿ ಅವರು ಜನರನ್ನು ಸೇರಿಸುತ್ತಾರೆ. ಮುಂದೆ ಅದುವೇ ಅಮ್ಮಂದಿರ ದಿನಾಚರಣೆಯಾಗಿ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ.
ಒಂದು ಮಾತು…….. ನಾನೂ ಮೊದಲೇ ಹೇಳಿದಂತೆ "ತಾಯಿ"- ಎನ್ನುವ ಸ್ಥಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಿಂದಾಗಿ ನಾವು ಇರುವ ತಾಯಿಯನ್ನು ಕಷ್ಟ ಕೊಡದೆ ನೋಡಿಕೊಳ್ಳಬೇಕು. ಕಾಣದ ದೇವರನ್ನ ನಾವು ಪೂಜಿಸುವುದಕ್ಕಿಂತ, ಕಣ್ಣಿಗೆ ಕಾಣುವ ದೇವತೆಯಾದ ಅಮ್ಮನನ್ನ ಪೂಜಿಸುವುದೇ ಮೇಲು ಎನ್ನುವುದು ನನ್ನ ಅನಿಸಿಕೆ.
ಅಮ್ಮನ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ಮಕ್ಕಳ ತಾಯಂದಿರಿಗೂ ಶುಭಾಶಯಗಳು.
ಅಮ್ಮನ ದಿನಾಚರಣೆ ಸಂದರ್ಭದಲ್ಲಿ ನನ್ನ ಸ್ನೇಹಿತೆ ವಾಣಿ ಶಿವಕುಮಾರ್ ರವರು ಒಂದು ಅರ್ಥಪೂರ್ಣ ಮೌಲಿಕ ಕವನವನ್ನು ಬರೆದಿದ್ದಾರೆ ಅದು ನಿಮಗಾಗಿ…….ನನ್ನಮ್ಮನೆಂದರೆ………!.
ಅಮ್ಮ ನಾ ನಿನ್ನ ಕರುಳು
ಗರ್ಭವನ್ನೇ ಗುಡಿಯನ್ನಾಗಿಸಿ
ಕಾಯುತ್ತಲಿದ್ದೆ
ಹಗಲಿರುಳು
ಕನ್ನಡಿಯ ಪ್ರತಿಬಿಂಬದಂತಿದೆ ನಿನ್ನ ನೆರಳು ಹೇಳಮ್ಮ ನಿನಗೆ ಸರಿಸಾಟಿ ಯಾರಿಹರು…?
ಜಗದೊಳಗೆ ಹಲವಾರು ಗುಡಿ ಗೋಪುರಗಳಿವೆ
ಎಲ್ಲಾ ಕಡೆ ಸುತ್ತಿ ಬಂದರೂ ಸಹ
ಮನಸ್ಸಿಗೆಕೋ ಕಸಿವಿಸಿ
ಒಮ್ಮೆ
ನಿನ್ನನ್ನು ನೋಡಿ ಪಾದವನ್ನು ಸ್ಪರ್ಶಿಸಿದರೆ
ಸಾಕು
ದೇವಾನುದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ
ಹೇಳಮ್ಮ ನಿನಗೆ ಸರಿಸಾಟಿ ಯಾರಿಹರು…?
ನಿನ್ನ ಮಡಿಲಲ್ಲಿ ಒಮ್ಮೆ ಮಲಗಿದರೆ ಸಾಕು
ವಿಶ್ವವನ್ನೇ ಗೆಲ್ಲಬಹುದೆಂಬ ಆತ್ಮಸ್ಥೈರ್ಯ ಮೂಡುತ್ತದೆ
ನಮ್ಮ ಕೋಪ ಸಿಟ್ಟು ಮುನಿಸೆಲ್ಲವನ್ನು ಮನ್ನಿಸಿ, ನಮ್ಮ ಅಭಿವೃದ್ಧಿ ಏಳಿಗೆಗಾಗಿ ಹಪಹಪಿಸುವ ಜೀವ
ಹೇಳಮ್ಮ ನಿನಗೆ ಸರಿಸಾಟಿ ಯಾರಿಹರು….?
ನಿನ್ನ ನಿಸ್ವಾರ್ಥ ಕಾಯಕದಿಂದ
ನಮ್ಮನ್ನು ಕಣ್ಣರೆಪ್ಪೆಯಂತೆ
ಕಾಯುವ
ದಿಕ್ಸೂಚಿಯಾಗಿರುವ
ಅಮೃತಾನಂದಮಯಿ ನೀನು
ಹೇಳಮ್ಮ ನಿನಗೆ ಸರಿಸಾಟಿ ಯಾರಿಹರು…?
ತಾಯಿಯ ಬೇಕು- ಬೇಡಗಳಿಗೆ ಸ್ಪಂದಿಸೋಣ.
ತಾಯಿ ಋಣ ತೀರಿಸಲು ಒಂದು ಜನ್ಮ ಸಾಕಾಗುವುದಿಲ್ಲ. ತಾಯಿಯ ಬಗ್ಗೆ ನಾ ಏನು ಹೇಳಲಿ ಅದು ಹೇಳಿದಷ್ಟು ಮುಗಿಯದ ಅಕ್ಷಯಪಾತ್ರೆ!. ತಾಯ ಮಮತೆ, ಪ್ರೀತಿ- ವಾತ್ಸಲ್ಯ ಎಲ್ಲವೂ ಕೂಡ ಅಮೂಲ್ಯವಾದದ್ದು. ಅದನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವುದೇ ಇಲ್ಲ!. ತಾಯಿಯ ಕುರಿತಾಗಿ ಅನೇಕ ಚಿತ್ರಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳು, ಜಾನಪದ ಗೀತೆಗಳು ಇವೆ. ತಾಯಿಯ ಕುರಿತಾಗಿ ಅನೇಕ ಕವನಗಳು, ಕಥೆಗಳು, ಲೇಖನಗಳು ಇವೆ. ಜೊತೆಗೆ ಈ ಅಮ್ಮನ ಕುರಿತಾಗಿ ಅನೇಕ ರೋಮಾಂಚನಕಾರಿ ಅಂಶಗಳು ಇವೆ. 9 ತಿಂಗಳು ನಮ್ಮನ್ನ ಹೊತ್ತು ಹೆತ್ತು ತನ್ನ ಸಾರವನ್ನೆಲ್ಲ ಹಾಲಿನ ಮೂಲಕ ನಮಗೆ ಕುಡಿಸಿ ಈ ಒಂದು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿ ನೀಡುತ್ತಾಳೆ. ಇವತ್ತಿಗೂ ನಮಗೆ ತಂದೆ-ತಾಯಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮಕ್ಕಳು ಇದ್ದಾರೆ. ಇದಕ್ಕಿಂತ ಬೇರೆ ಕೊಡುಗೆ ಬೇಕೆ?!. ಈಗಲೂ ಕೂಡ ಹಲವರು ತಾಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಬರೆಯುತ್ತಾರೆ. ಒಂದೊಂದು ಬರಹಗಳು ಒಂದೊಂದು ರೀತಿಯಲ್ಲಿ ತಾಯಿ ಮಮತೆಯನ್ನ...ವಾತ್ಸಲ್ಯವನ್ನು….. ದಾಖಲಿಸುತ್ತವೆ. ಆದುದರಿಂದಾಗಿ ಈ ಅಮ್ಮನ ಕುರಿತು ಒಂದು ರೀತಿಯಲ್ಲಿ ವಿಶಾಲ ಪ್ರಪಂಚವೇ ಅಡಗಿದೆ ಎನ್ನಬಹುದು.
ಅಮ್ಮನ ದಿನಾಚರಣೆ ಎನ್ನುವುದು ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಇದು ಒಂದು ರೀತಿಯಲ್ಲಿ ಅಮ್ಮನನ್ನ ನೆನೆಯಲು ಒಂದು ವೇದಿಕೆ ಅಷ್ಟೇ. ಅಮ್ಮನ ಕುರಿತಾಗಿ ಅನೇಕ ಕವಿಗಳು ತಮ್ಮ ಅರ್ಥಪೂರ್ಣ ಕವಿತೆಯ ಮೂಲಕ ಒಂದು ಸುವರ್ಣ ಚೌಕಟ್ಟನ್ನು ಹಾಕಿದ್ದಾರೆ. ಆ ಕವನಗಳಿಗೆ ಸಂಗೀತ ಸ್ಪರ್ಶದೊಂದಿಗೆ ಗಾಯಕ ಗಾಯಕಿಯರ ಸುಮಧುರ ಕಂಠದೊಂದಿಗೆ ಹೇಳುವುದೇ ಒಂದು ರೀತಿಯಲ್ಲಿ ಸೊಗಸು!. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಂಬ ಮುದ್ದುಕೃಷ್ಣನ ವಾತ್ಸಲ್ಯ ಭರಿತ ಹಾಡು, “ದುಡ್ಡು ಕೊಟ್ಟರೆ ಬೇಕಾದಷ್ಟು ಸಿಗುತೈತೆ ಈ ಜಗದಲಿ ಕಾಣೋ….. ಹೆತ್ತ ತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನೋ?” ಎಂಬ ಜಾನಪದ ಗೀತೆಯಂತೂ ಈ ದಿನಕ್ಕೂ ಕೂಡ ಪ್ರಸ್ತುತವಾಗಿ ತಾಯಿಯ ಮಹತ್ವವನ್ನು ಸಾರುತ್ತದೆ. ಆದರೆ ಇಂದು ಕಾಲ ಬದಲಾಗಿದೆ. ತಾಯಿಯ ಪ್ರೀತಿ ಪಡೆದ ಅನೇಕ ಮಕ್ಕಳು ಸರಿಯಾಗಿ ಹೆತ್ತ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿಲ್ಲ. ಇವತ್ತಿನ ಯಾಂತ್ರಿಕ ಜೀವನದಲ್ಲಿ ತಾಯಿಯ ಯೋಗ ಕ್ಷೇಮ ವಿಚಾರಿಸಲು ಕೂಡ ಅವರಿಗೆ ಪುರುಸೊತ್ತಿಲ್ಲ. ನಾನು ಒಂದಿಷ್ಟು ಹಣ ಕೊಡುತ್ತೇವೆ ಅಥವಾ ಯಾರನ್ನಾದರೂ ನೇಮಿಸಿದರೆ ಆಯಿತು. ಇನ್ನು ಮುಂದುವರೆದು ಹೇಗಿದ್ದರೂ ವೃದ್ಧಾಶ್ರಮಗಳು ಇವೆ ಅಲ್ಲಿಗೆ ಸೇರಿಸಿಬಿಡುತ್ತಾರೆ. ಅವರು ಒಂದು ರೀತಿಯಲ್ಲಿ ತಮ್ಮ ಅಂತಿಮ ದಿನಗಳನ್ನ ಕಠೋರವಾಗಿ ಕಳೆಯುವ ಸಂದರ್ಭ ಬಂದಿದೆ. ಇದು ಒಂದು ರೀತಿಯಲ್ಲಿ ವಾಸ್ತವ ಅಂಶ ಆಗಿದೆ. ಏಕೆಂದರೆ ಇವತ್ತಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡುವ ತಂದೆ ತಾಯಿಗಳನ್ನೇ ಕೂಡ ದೂರ ಮಾಡುವ ಮಕ್ಕಳು ಕೂಡ ನಮ್ಮ ಕಣ್ಣೆದುರು ಇದ್ದಾರೆ.
ಅವರಿಗೆ ಕನಿಷ್ಠ ಸೌಲಭ್ಯವನ್ನು ಕೂಡ ಒದಗಿಸುತ್ತಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧ ತಂದೆ ತಾಯಿಗಳನ್ನು ಜೊತೆಗೆ ಆಸ್ತಿ ವಿಚಾರಕ್ಕಾಗಿ ಅವರನ್ನೇ ಕೊಲೆ ಮಾಡುವ ಮಕ್ಕಳು ಕೂಡ ನಮ್ಮ ಕಣ್ಣೆದುರು ಇದ್ದಾರೆ. ಎನ್ನುವುದೇ ಅಚ್ಚರಿಯ ಸಂಗತಿ. ಯಾವುದೇ ನಿರೀಕ್ಷೆಯಿಲ್ಲದೆ ಅವರನ್ನ ಓದಿಸಿ ನಾವು ಪಟ್ಟ ಶ್ರಮ ಅವರು ಪಡಬಾರದು ಎಂದು ಸಮಾಜದಲ್ಲಿ ಮುಂದೆ ತಂದರೂ ಕೂಡ ಅದನ್ನು ಮಕ್ಕಳು ಅರ್ಥ ಮಾಡಿಕೊಳ್ಳುತ್ತಿಲ್ಲ.
ಈಗ ಏನಿದ್ದರೂ ಕೂಡ ತಾನಾಯಿತು ತನ್ನ ಕುಟುಂಬವಾಯಿತು ಎಂದು ಮಕ್ಕಳು ಮದುವೆಯಾದ ಮೇಲೆ ಹೆತ್ತ ತಂದೆ ತಾಯಿಯನ್ನೇ ಮರೆತುಬಿಡುತ್ತಾರೆ!. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಮುಂದೆ ಒಂದು ಕಾಲ ಬಂದೇ ಬರುತ್ತದೆ ಎನ್ನುವ ವಾಸ್ತವದ ಅರಿವಿದ್ದರೂ ಕೂಡ ಅದನ್ನ ಯಾವುದೇ ರೀತಿಯಲ್ಲಿ ಯೋಚನೆ ಮಾಡದೆ ತಮ್ಮ ಪ್ರಸ್ತುತ ವೈಭವ ದಿನಗಳನ್ನ ಕಳೆದುಬಿಡುತ್ತಾರೆ. ಇವೆಲ್ಲ ನೋಡುತ್ತಾ ಹೋದರೆ ಇವತ್ತಿನ ಸಮಾಜದಲ್ಲಿ ಏನು ನಡೆಯುತ್ತಿದೆ ಎಂದೆನಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ರೀತಿಯಲ್ಲಿ ಇದ್ದರೆ ನಗರ ಪ್ರದೇಶಗಳಲ್ಲಿ ಮತ್ತಷ್ಟು ಭಿನ್ನವಾಗಿದೆ. ನಮಗೆ ಇಲ್ಲಿ ಅಮ್ಮನ ಬಗ್ಗೆ ಕನಿಕರ ಬೇಕಾಗಿಲ್ಲ. ಅಮ್ಮನು ಕೂಡ ತನ್ನ ಬದುಕನ್ನ ಸಮಾಜದಲ್ಲಿ ಕಂಡುಕೊಳ್ಳುತ್ತಾಳೆ. ಅವಳಿಗೆ ಅನುಕಂಪ ಬೇಕಾಗಿಲ್ಲ. ಅವಳಿಗೆ ಕನಿಷ್ಠ ಸವಲತ್ತುಗಳನ್ನು ಒದಗಿಸಿದರೆ ಸಾಕು. ಅವಳು ಹೇಗೆ ಜೀವನವನ್ನು ಸಾಗಿಸುತ್ತಾಳೆ. ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಅನೇಕ ತಂದೆ ತಾಯಿಗಳು ಕನಿಷ್ಠ ಗುಡಿಸಿನಲ್ಲಿ ಇದ್ದುಕೊಂಡು ಕೂಲಿ ನಾಲಿ ಮಾಡಿ ಮಕ್ಕಳನ್ನು ಬೆಳೆಸಿದ್ದು ಉಂಟು. ಇವತ್ತಿನ ದಿನಗಳಲ್ಲಿ ನಮ್ಮ ಯುವಜನತೆ ತಂದೆ ತಾಯಿಯ ಕಷ್ಟವನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೊಬೈಲ್ ಸಂಸ್ಕೃತಿಯಲ್ಲಿ ಮುಳುಗಿ ತಮಗಿಷ್ಟ ಬಂದ ರೀತಿಯಲ್ಲಿ ಮೋಜು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳದೆ ಅನಾರೋಗ್ಯ ಪೀಡಿತ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೆ ಕಾಲ ಕಳೆಯುತ್ತಿದ್ದಾರೆ. ಇದರಿಂದ ಎಂದು ಹೊರ ಬರುತ್ತಾರೆ ಎನ್ನುವುದೇ ಯಕ್ಷಪ್ರಶ್ನೆ. ಅಮ್ಮನ ಪ್ರೀತಿಯುತ ಮಾತು ನಮಗೆ ಸಂಜೀವಿನಿಯಂತಿರುತ್ತದೆ. ಎಷ್ಟೋ ಕಡೆ ತಾನು ಎಷ್ಟೇ ನೋವನ್ನ ಅನುಭವಿಸಿದರು ಅದನ್ನು ಹೇಳಿಕೊಳ್ಳದೆ ತಮ್ಮ ಮಕ್ಕಳ ಎದುರು ನಾನು ಚೆನ್ನಾಗಿ ಬದುಕುತ್ತಿದ್ದೇನೆ ಎಂದು ನೋವನ್ನು ನುಂಗಿಕೊಂಡ ಅನೇಕ ಅಮ್ಮಂದಿರು ಕೂಡ ನಮ್ಮೆದುರು ಇದ್ದಾರೆ. ಜೊತೆಗೆ ಬೆಳಿಗ್ಗೆಯಿಂದ ರಾತ್ರಿವರೆಗೂ ಕೂಡ ಮನೆಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ನಾವು ಅಮ್ಮನಿಗಾಗಿ ಈ ಒಂದು ದಿನ ಸಾಂಕೇತಿಕವಾದರೂ ಕೂಡ ಆಚರಿಸಬೇಕು “ಒಂದು ಕೋಳಿ 10 ಮರಿಗಳನ್ನು ಸಾಕುತ್ತದೆ. ಅದೇ 10 ಮರಿಗಳು ಒಂದು ಕೋಳಿಯನ್ನು ಸಾಕುವುದಿಲ್ಲ”- ಎನ್ನುವ ಒಂದು ಮಾತು ಕೂಡ ಇದೆ.
ಒಟ್ಟಿನಲ್ಲಿ ಎಷ್ಟೋ ಮಕ್ಕಳಿಗೆ ತಾಯಿ ಇರುವುದೇ ಇಲ್ಲ. ಇರುವ ತಾಯಿಯನ್ನು ನಾವು ಸರಿಯಾಗಿ ನೋಡಿಕೊಂಡು, ಅವಳ ಬೇಕು ಬೇಡಗಳಿಗೆ ಸ್ಪಂದಿಸಬೇಕು. ಅವಳ ಋಣವನ್ನಾಗಿ ಈ ಜನ್ಮದಲ್ಲಾದರೂ ತೀರಿಸೋಣ. ಇವತ್ತಿನಿಂದಾದರೂ ತಾಯಿಯ ಪ್ರೀತಿಗೆ ಸ್ಪಂದಿಸೋಣ.

ಕಾಳಿಹುಂಡಿ ಶಿವಕುಮಾರ್ ಮೈಸೂರು.