- ಹೈಟೆಕ್ ಶೌಚಾಲಯ ಸೇರಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಚಾಮರಾಜನಗರ, ಆ.26- ಗಿರಿಜನ, ಹರಿಜನ ಹಾಗು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಮ್ಮ ನಾರಿ ಟ್ರಸ್ಟ್ ಶ್ರಮಿಸುತ್ತಿದ್ದು, ಕಾಗಲವಾಡಿ ಟಿ.ಎಸ್. ಸುಬ್ಬಣ್ಣ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ದಿಗೆ 22 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ನಾರಿಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್. ಮುರಳೀಧರ್ ತಿಳಿಸಿದರು.

ತಾಲೂಕಿನ ಕಾಗಲವಾಡಿ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯ ಅವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಿ ಅವರು ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕರಾದ ಲಿಂಗರಾಜು ಅವರ ನಮ್ಮ ಟ್ರಸ್ಟ್ ಅನ್ನು ಸಂಪರ್ಕ ಮಾಡಿ, ಶಾಲೆಯ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಬಳಿಕ ಶಾಲೆಗೆ ಭೇಟಿ ನೀಡಿದಾಗ ಮತ್ತು ಇಲ್ಲಿನ ಮಕ್ಕಳ ಕಲಿಕೆ ಅಸಕ್ತಿ ಅವರ ಆರ್ಥಿಕ ಮಟ್ಟವನ್ನು ನೋಡಿ, ಈ ಶಾಲೆಯನ್ನು ಅಭಿವೃದ್ದಿ ಪಡಿಸಬೇಕೆಂಬ ಸಂಕಲ್ಪ ಮಾಡಿ, ಇಂದು ಗುದ್ದಲಿಪೂಜೆ ನೆರವೇರಿಸುತ್ತಿದ್ದೇವೆ. ಈಗಾಗಲೇ ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತç, ನೋಟ್‌ಬುಕ್, ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.
ಟಿ.ಎಸ್. ಸುಬ್ಬಣ್ಣ ಶಾಲೆಯ ಆವರಣದಲ್ಲಿ ಬಾಲಕ, ಬಾಲಕಿಯರರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ನಿರ್ಮಾಣ, ವಿಜ್ಞಾನ ಲ್ಯಾಬ್, ಶಾಲೆ ಮಕ್ಕಳಿಗೆ ಡೆಸ್ಕ್ಗಳು, ಕಂಪ್ಯೂಟರ್ ಲ್ಯಾಬ್ ಹಾಗೂ ಶಾಲೆಯ ಮೇಲ್ಛಾವಣಿ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಮೈಸೂರಿನಲ್ಲಿರುವ ನಮ್ಮ ನಾರಿ ಟ್ರಸ್ಟ್ ವಿವಿಧ ಕಂಪನಿಗಳು ಹಾಗೂ ದಾನಿಗಳ ನೆರವಿನಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ ಮೈಸೂರು ಜಿಲ್ಲೆಯ ಅನೇಕ ಶಾಲೆಗಳನ್ನು ನವೀಕರಣ, ಅಲ್ಲಿನ ಮಕ್ಕಳಿಗೆ ನೋಟ್‌ಬುಕ್, ಕಲಿಕಾ ಸಲಕರಣೆ, ಆಟೋಪಕರಣಗಳನ್ನು ನೀಡಿದ್ದೇವೆ. ಚಾ.ನಗರ ತಾಲೂಕಿನ ಅನೇಕ ಅನೇಕ ಶಾಲೆಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆಗಳಿಗೆ ಅಗತ್ಯ ಪಿಠೋಪಕರಣಗಳನ್ನು ನೀಡಲಾಗುತ್ತದೆ ಎಂದು ಸಿ.ಎಸ್. ಮುರುಳೀಧರ್ ತಿಳಿಸಿದರು.
ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷರಾದ ತಾ.ಪಂ. ಮಾಜಿ ಸದಸ್ಯ ಕಾಗಲವಾಡಿ ಶಿವಸ್ವಾಮಿ ಮಾತನಾಡಿ, ನಮ್ಮ ಗ್ರಾಮದ ಶಾಲೆಯನ್ನು ಅಭಿವೃದ್ದಿ ಪಡಿಸಿ, ಗುಣಮಟ್ಟದ ಶಿಕ್ಷಣಕ್ಕೆ ನಾರಿ ಟ್ರಸ್ಟ್ ಅಧ್ಯಕ್ಷರು ಮುಂದಾಗಿರುವುದು ಸಂತಸ ತಂದಿದೆ. ನಾವು ಓದಿದ ಶಾಲೆ ಇದಾಗಿದ್ದು, ಶಾಲೆಯ ಅಭಿವೃದ್ದಿಗೆ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನಟಶೇಖರಮೂರ್ತಿ, ಯ. ಜಯಶಂಕರಮೂರ್ತಿ, ಸರ್ಕಾರಿ ಐಟಿಐ ಪ್ರಾಂಶುಪಾಲ ರಂಗಸ್ವಾಮಿ, ಮುಖ್ಯ ಶಿಕ್ಷಕ ಲಿಂಗರಾಜು, ಸಹ ಶಿಕ್ಷಕರಾದ ಮಲ್ಲೇಶಗೌಡ, ಮಂಜು, ಕುಮಾರ್, ಮಮತ, ವಿರೂಪಾಕ್ಷ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
