ಚಾಮರಾಜನಗರ: ಸಂಗೀತ, ನೃತ್ಯದಂತಹ ಕಲಾ ಪ್ರಕಾರಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತಿದ್ದು, ಇವುಗಳಿಗೆ ನಿರಂತರ ಉತ್ತೇಜನ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಹೇಳಿದರು.
ನಗರದ ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿರುವ ಮಾಧುರ್ಯ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕøತಿ, ಕಲೆ ಮನುಷ್ಯನಿಗೆ ನೆಮ್ಮದಿ, ಶಾಂತಿ ತಂದು ಕೊಡಲಿದೆ. ಕಲಾವಿದರ ಪರಿಶ್ರಮ ಅಪಾರವಾಗಿರುತ್ತದೆ. ಕಲಾವಿದರ ಪ್ರತಿಭೆ ಅನಾವರಣದ ಹಿಂದೆ ಸಾಕಷ್ಟು ಸಿದ್ದತೆ ಶ್ರದ್ದೆ ಇರಲಿದೆ. ಹೀಗಾಗಿ ಕಲೆ ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ದಿಯಾಗಿದೆ. ಇಲ್ಲಿ ನಾನಾ ಪ್ರಕಾರದ ಕಲೆ ಗಮನಸೆಳೆದಿದೆ. ಮಲೆಮಹದೇಶ್ವರ, ಮಂಟೇಸ್ವಾಮಿ, ಸಿದ್ದಾಪ್ಪಾಜಿ ಹೀಗೆ ಹಲವು ಪವಾಡ ಪುರುಷರ ನೆಲೆ ಚಾಮರಾಜನಗರ ಜಿಲ್ಲೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಯುವ ಜನರು ಕಲೆ, ಸಾಂಸ್ಕøತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅಕಾಡೆಮಿಯು ಸಂಗೀತ, ನೃತ್ಯ, ಸಮಾವೇಶ, ಕಾರ್ಯಾಗಾರಗಳನ್ನು ನಡೆಸುತ್ತಿದೆ. ಕಲಾವಿದರಿಗೆ ಶಿಷ್ಯ ವೇತನ ಹಾಗೂ ಹಿರಿಯ ಕಲಾವಿದರಿಗೆ ಪಿಂಚಣಿಯಂತಹ ಸೌಲಭ್ಯವನ್ನು ಸಮರ್ಪಕವಾಗಿ ನೀಡುತ್ತಿದೆ. ಹಲವಾರು ಚಟುವಟಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಾರ್ಥಕ ಭಾವನೆ ಅಕಾಡೆಮಿಗೆ ಇದೆ ಎಂದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಪದ ದೇವರಾಜು ಅವರು ಮಾತನಾಡಿ ಅಕಾಡೆಮಿಯು ನಾಡಿನಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ಅವಕಾಶ ನೀಡಿ ಗೌರವಿಸುತ್ತಿದೆ. ಯಾರಿಗೆ ಅವಕಾಶವಿಲ್ಲವೋ ಅಂತಹವರನ್ನು ಗುರುತಿಸಿ ಅವಕಾಶ ಮಾಡಿಕೊಡುತ್ತಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡುವುದು ಅಕಾಡೆಮಿಯ ಉದ್ದೇಶವಾಗಿದೆ. ಈಗಾಗಲೇ 12 ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎನ್. ಮುನಿರಾಜು ಅವರು ಮಾತನಾಡಿ ನೃತ್ಯ, ಸಂಗೀತ ಜನರ ನಡುವೆಯೇ ಹುಟ್ಟಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲಿ ಅಕಾಡೆಮಿಯು ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ. ಕಾರ್ಯಕ್ರಮಗಳು ಹೆಚ್ಚಾಗಿ ಯುವ ಜನರಿಗೆ ತಲುಪಬೇಕು ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕರಾದ ಎ.ಎಂ. ಮಹದೇವ ಪ್ರಸಾದ್ ಸೂಳೇರಿಪಾಳ್ಯ, ಅಕಾಡೆಮಿ ಸದಸ್ಯರಾದ ಡಿ.ಆರ್. ರಾಜಪ್ಪ, ಡಾ. ಮದ್ದೇರಿ ಪಿ. ಮುನಿರೆಡ್ಡಿ, ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನರೇಂದ್ರ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಸಾಹಿತಿ ಡಾ. ಮಹೇಶ್ ಚಿಕ್ಕಲ್ಲೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದುಷಿ ಗಗನಶ್ರೀ ಕಶ್ಯಪ್ ಎಂ.ಎಂ ಮತ್ತು ತಂಡದವರಿಂದ ಭರತನಾಟ್ಯ, ರಂಗರಾಜು ಮತ್ತು ತಂಡದಿಂದ ಕಥಾಕೀರ್ತನ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Like this:
Like Loading...
Related