ಪತ್ರಿಕಾ ದಿನಾಚರಣೆ : ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

ಚಾಮರಾಜನಗರ : ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ವಿವಿಧ ದತ್ತಿ ಪ್ರಶಸ್ತಿಗಳಿಗೆ 6 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಜು.19 ರಂದು ನಗರದ ವರ್ತಕರ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ವಿಶೇಷ ದತ್ತಿ ಪ್ರಶಸ್ತಿಗಳಿಗೆ ಜಿಲ್ಲೆಯ 6 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಗೆ ಸುದ್ದಿಸಂಜೆ ಪತ್ರಿಕೆಯ ವರದಿಗಾರರಾದ ಎಂ.ಬಸವರಾಜು ಆಯ್ಕೆಯಾಗಿದ್ದಾರೆ.

ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ದತ್ತೇಶ್ ಕುಮಾರ್ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಗೆ ಹನೂರು ತಾಲ್ಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ. ಮಹಾದೇಶ ಆಯ್ಕೆಯಾಗಿದ್ದಾರೆ.

ಚಾಮರಾಜನಗರದ ಗುತ್ತಿಗೆದಾರರಾದ ಹೊಸೂರು ಜಗದೀಶ್ ತಮ್ಮ ತಂದೆಯ ಸ್ಮರಣಾರ್ಥ ಸ್ಥಾಪಿಸಿರುವ ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕರಾದ ಬದನಗುಪ್ಪೆ ಮಲ್ಲಣ್ಣ ಆಯ್ಕೆಯಾಗಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಎಂ ಗಣೇಶ್‌ಪ್ರಸಾದ್ ತಮ್ಮ ತಂದೆ ಸ್ಮರಣಾರ್ಥ ಸ್ಥಾಪಿಸಿರುವ ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿಗೆ ಗುಂಡ್ಲುಪೇಟೆ ತಾಲ್ಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ಬೇಗೂರು ವರದಿಗಾರ ಮಣಿಕಂಠ ಬೇಗೂರು ಆಯ್ಕೆಯಾಗಿದ್ದಾರೆ.

ಮಾಜಿ ಸಚಿವರಾದ ಎನ್.ಮಹೇಶ್ ತಮ್ಮ ಪತ್ನಿ ಹಾಗೂ ಲೇಖಕಿ ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗೆ
ಆರ್.ಮ್ಯಾಕ್ಸ್ ನ್ಯೂಸ್ ವರದಿಗಾರರಾದ ಕೊಳ್ಳೇಗಾಲದ ಸಿ.ಬಸಂತ್ ಕುಮಾರ್ ಆಯ್ಕೆಯಾಗಿದ್ದಾರೆ.

ಉದ್ಯಮಿ ವೃಷಬೇಂದ್ರಪ್ಪ ತಮ್ಮ ತಂದೆ ಸ್ಮರಣಾರ್ಥ ಸ್ಥಾಪಿಸಿರುವ ಹೊನ್ನಹಳ್ಳಿ ಪಟೇಲ್ ಎಚ್.ಎಂ. ಪುಟ್ಟಮಾದಪ್ಪ ದತ್ತಿ ಪ್ರಶಸ್ತಿಗೆ ಗೊರುಕನ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರರಾದ ವೈ.ಎಂ.ಭಾನುಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *