ಚಾಮರಾಜನಗರ:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾನಿರತರರು ಅಲ್ಲಿಂದ ಮೆರವಣಿಗೆ ಯಲ್ಲಿ ಪಚ್ಚಪ್ಪ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಜಿಪಂ ಸಿಇಒ ಮೋನಾರೋತ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇ ಟರ್‌ಗಳು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನ ಆಧರಿಸಿ 750, 1,500 ಹಾಗೂ 3,000 ರೂ. ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ನೌಕರರು ನಿವೃತ್ತಿ ಅಥವಾ ಮೃತಪಟ್ಟ ಸಂದರ್ಭದಲ್ಲಿ 6 ಲಕ್ಷ ಇಡುಗಂಟು ನೀಡಬೇಕು. ಗ್ರಾಮ ಪಂಚಾಯಿತಿ ಠರಾವಿನ ಮೂಲಕ ನೇಮಕಗೊಂಡು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯದ ಸಿಬ್ಬಂದಿಗೂ ಇಡಗಂಟು ನೀಡಲು ಆದೇಶಿಸಬೇಕು ಎಂದರು.ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಹಾಗೂ ವಾರ್ಷಿಕ ನವೀಕರಣ ಪದ್ಧತಿ ರದ್ದುಪಡಿಸಬೇಕು. 15ನೇ ಹಣಕಾಸು ಯೋಜನೆಯಡಿ ವೇತನ ಪಾವತಿಸಬೇಕು. ಪ್ರತಿ ಪಂಚಾಯಿತಿಗೆ ಒಬ್ಬ ಚಾಲಕನನ್ನು ಪರಿಗಣಿಸಿ 15 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದ ಬಡ್ತಿ ಪದ್ಧತಿ ಬದಲಿಸಿ ಜಿಲ್ಲಾ ಮಟ್ಟದಲ್ಲಿ ಬಡ್ತಿಗೆ ಅವಕಾಶಕಲ್ಪಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಮ್ಮನಪುರ ಸುರೇಶ್, ಜಿಲ್ಲಾ ಖಜಾಂಚಿ ದೊರೆಸ್ವಾಮಿ, ತಾಲೂಕು ಅಧ್ಯಕ್ಷ ಎನ್.ಕೃಷ್ಣ , ಪ್ರಧಾನ ಕಾರ್ಯದರ್ಶಿ ನಂದೀಶ್, ಯಳಂದೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ, ಗುಂಡ್ಲುಪೇಟೆ ಅಧ್ಯಕ್ಷ ತಾಲೂಕು ರಾಜಣ್ಣ, ಕುದೇರು ರವೀಂದ್ರ ಇತರರು ಭಾಗವಹಿಸಿದ್ದರು.
