ಪ್ರಜಾ ಸೇವಾ (iPGRS) ಪೋರ್ಟಲ್‌ನ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಇನ್ನು ಮುಂದೆ ‘ಸಕಾಲ’ ವ್ಯಾಪ್ತಿಗೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

  • ​ವಿಳಂಬ ಮತ್ತು ದೋಷಪೂರಿತ ಸೇವೆಗೆ ಅಧಿಕಾರಿಗಳಿಂದಲೇ ಗರಿಷ್ಠ ರೂ. 1,500 ಪರಿಹಾರ ವಸೂಲಿ; ದುರುದ್ದೇಶಪೂರಿತ ದೂರುದಾರರಿಗೂ ದಂಡ

​ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಹಾಗೂ ಗುಣಾತ್ಮಕವಾಗಿ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದ್ದು, ‘ಪ್ರಜಾ ಸೇವಾ (iPGRS)’ ತಂತ್ರಾಂಶದಲ್ಲಿ ನೋಂದಾಯಿತವಾಗುವ ಎಲ್ಲಾ ಸಾರ್ವಜನಿಕ ಕುಂದುಕೊರತೆಗಳ ಪರಿಹಾರವನ್ನು ‘ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ, 2011’ರ ವ್ಯಾಪ್ತಿಗೆ ತಂದು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಜಾ ಸೇವಾ ಸಂಖ್ಯೆ (iPGRS ಸಂಖ್ಯೆ) ಪಡೆಯುವ ಪ್ರತಿಯೊಂದು ಸಾರ್ವಜನಿಕ ದೂರಿಗೂ ಈ ನೂತನ ನಿಯಮ ಅನ್ವಯವಾಗಲಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಅವುಗಳ ಅಧೀನದ ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು, ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಇದರ ವ್ಯಾಪ್ತಿಗೆ ಬರುತ್ತವೆ. ನಾಗರಿಕರು 1902 ಸಹಾಯವಾಣಿ, ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳು, ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಅಥವಾ ಜನ ಸಭೆಗಳ ಮೂಲಕ ಸಲ್ಲಿಸುವ ಎಲ್ಲಾ ಕುಂದುಕೊರತೆಗಳೂ ಸಕಾಲ ಸೇವೆಯಡಿ ಪರಿಗಣಿಸಲ್ಪಡುತ್ತವೆ.

​ಮೂರು ಹಂತಗಳಲ್ಲಿ 21 ದಿನಗಳ ಕಾಲಮಿತಿ ಮತ್ತು ಸ್ವಯಂಚಾಲಿತ ಮೇಲ್ಮನವಿ :

ನೂತನ ಅಧಿಸೂಚನೆಯ ಪ್ರಕಾರ, ದೂರುಗಳ ಇತ್ಯರ್ಥಕ್ಕೆ ಮೂರು ಹಂತದ ಅಧಿಕಾರಿಗಳನ್ನು ಮ್ಯಾಪ್ ಮಾಡಲಾಗಿದ್ದು, ಪ್ರತಿ ಹಂತಕ್ಕೂ ನಿಗದಿತ ಕಾಲಮಿತಿ ಹೇರಲಾಗಿದೆ. ಪದನಿರ್ದಿಷ್ಟ ಅಧಿಕಾರಿಯಾದ (L1 – ಕೊನೆಯ ಹಂತದ ಕಾರ್ಯಕಾರಿ) ದೂರು ವಹಿಸಲ್ಪಟ್ಟ ದಿನದಿಂದ 21 ದಿನಗಳೊಳಗೆ ಪರಿಹಾರ ನೀಡಬೇಕು. ಒಂದು ವೇಳೆ ನಾಗರಿಕರು ತಪ್ಪು ವರ್ಗ ಅಥವಾ ಕೇವಲ ಜಿಲ್ಲೆ/ಇಲಾಖೆಯನ್ನು ಆಯ್ಕೆ ಮಾಡಿದ್ದರೆ, ನೋಡಲ್ ಅಧಿಕಾರಿಯು ಸರಿಯಾದ L1 ಅಧಿಕಾರಿಗೆ ದೂರನ್ನು ಮರುನಿಯೋಜಿಸಲು ಹೆಚ್ಚುವರಿ 7 ದಿನಗಳ ಕಾಲಾವಕಾಶವಿರುತ್ತದೆ. ಇಂತಹ ಸಂದರ್ಭಗಳಲ್ಲಿ ದೂರು ನೋಂದಣಿಯಾದ ದಿನದಿಂದ ಒಟ್ಟು ಪರಿಹಾರದ ಅವಧಿ 28 ದಿನಗಳನ್ನು ಮೀರುವಂತಿಲ್ಲ.

​ನಿಗದಿತ 21 ದಿನಗಳಲ್ಲಿ ದೂರು ಇತ್ಯರ್ಥವಾಗದಿದ್ದರೆ ಅಥವಾ ಪರಿಹಾರದ ಬಗ್ಗೆ ನಾಗರಿಕರು ನಕಾರಾತ್ಮಕ ಅಭಿಪ್ರಾಯ ನೀಡಿದರೆ, ದೂರು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸಕ್ಷಮ ಅಧಿಕಾರಿಗೆ (L2) ಮೊದಲ ಮೇಲ್ಮನವಿಯಾಗಿ ಉನ್ನತೀಕರಣಗೊಳ್ಳುತ್ತದೆ. ಅಲ್ಲಿಯೂ 21 ದಿನಗಳಲ್ಲಿ ಪರಿಹಾರ ಸಿಗದಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ (L3) ಎರಡನೇ ಮೇಲ್ಮನವಿಯಾಗಿ ವರ್ಗಾವಣೆಯಾಗಲಿದ್ದು, ಅವರೂ 21 ದಿನಗಳೊಳಗೆ ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ. ಸೂಕ್ತ ವಿಚಾರಣೆಯ ನಂತರ ಅರ್ಹತೆಯ ಆಧಾರದ ಮೇಲೆ ವಿಲೇವಾರಿ ಮಾಡಿ, ‘ಕ್ರಮ ಕೈಗೊಂಡ ವರದಿಯನ್ನು (ATR)’ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದಾಗ ಮಾತ್ರ ದೂರು ಪರಿಹಾರವಾಗಿದೆ ಎಂದು ಪರಿಗಣಿಸಲಾಗುತ್ತದೆ.

​ವಿಳಂಬ ಮತ್ತು ದೋಷಪೂರಿತ ಸೇವೆಗೆ ಅಧಿಕಾರಿಗಳಿಗೆ ದಂಡ :

ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026ರ ಅನ್ವಯ ಪರಿಹಾರ ವೆಚ್ಚದ ದರಗಳನ್ನು ಪರಿಷ್ಕರಿಸಲಾಗಿದೆ. ನಿಗದಿತ ಕಾಲಮಿತಿಯ ನಂತರ ವಿಳಂಬವಾಗುವ ಮೊದಲ 1 ರಿಂದ 5 ದಿನಗಳಿಗೆ ದಿನಕ್ಕೆ ರೂ. 20 (ಗರಿಷ್ಠ ರೂ. 100), 6 ರಿಂದ 10 ದಿನಗಳಿಗೆ ದಿನಕ್ಕೆ ರೂ. 40 (ಗರಿಷ್ಠ ರೂ. 300), 11 ರಿಂದ 15 ದಿನಗಳಿಗೆ ದಿನಕ್ಕೆ ರೂ. 60 (ಗರಿಷ್ಠ ರೂ. 600), 16 ರಿಂದ 20 ದಿನಗಳಿಗೆ ದಿನಕ್ಕೆ ರೂ. 80 (ಗರಿಷ್ಠ ರೂ. 1,000) ಹಾಗೂ 21 ರಿಂದ 25 ದಿನಗಳ ವಿಳಂಬಕ್ಕೆ ದಿನಕ್ಕೆ ರೂ. 100 ರಂತೆ ಒಟ್ಟಾರೆ ಪ್ರತಿ ಅರ್ಜಿಗೆ ಗರಿಷ್ಠ ರೂ. 1,500 ಪರಿಹಾರ ವೆಚ್ಚವನ್ನು ನಿಗದಿಪಡಿಸಲಾಗಿದೆ. ಅಲ್ಲದೆ, ಕಾಲಮಿತಿಯೊಳಗೆ ವಿಲೇವಾರಿ ಮಾಡಿದರೂ ಸೇವೆಯಲ್ಲಿ ಲೋಪದೋಷಗಳಿದ್ದರೆ ಅಥವಾ ಅರ್ಜಿಯನ್ನು ತಪ್ಪಾಗಿ ತಿರಸ್ಕರಿಸಿದ್ದರೆ ನಾಗರಿಕರಿಗೆ ಗರಿಷ್ಠ ರೂ. 1,500 ಪರಿಹಾರ ನೀಡಬೇಕಾಗುತ್ತದೆ. ಈ ಸಂಪೂರ್ಣ ಪರಿಹಾರದ ಮೊತ್ತವನ್ನು ಲೋಪಕ್ಕೆ ಹೊಣೆಗಾರರಾದ ಸಂಬಂಧಪಟ್ಟ ಅಧಿಕಾರಿಗಳಿಂದಲೇ ವಸೂಲಿ ಮಾಡಲಾಗುವುದು.

​ದುರುದ್ದೇಶಪೂರಿತ ದೂರುದಾರರಿಗೂ ರೂ. 1,500 ದಂಡ :

ಸರ್ಕಾರಿ ನೌಕರರಿಗೆ ಕೇಡಕುಂಟು ಮಾಡುವ, ಇನ್ನೊಬ್ಬ ನಾಗರಿಕನ ಮೇಲೆ ಒತ್ತಡ ಹೇರುವ ಅಥವಾ ಬೆದರಿಸುವ ಉದ್ದೇಶದಿಂದ ಸುಳ್ಳು ಹಾಗೂ ಕಿರುಕುಳಕಾರಿ ದೂರುಗಳನ್ನು ಸಲ್ಲಿಸುವವರ ವಿರುದ್ಧವೂ ಕಾಯ್ದೆಯ ಕಲಂ 13-ಬಿ ಅಡಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂದು ಸಾಬೀತಾದರೆ, ಅಂತಹ ನಾಗರಿಕರಿಗೆ ವಿಚಾರಣೆಗೆ ಸೂಕ್ತ ಅವಕಾಶ ನೀಡಿದ ನಂತರ ಪ್ರತಿ ಅರ್ಜಿಗೆ ರೂ. 1,500 ದಂಡ ವಿಧಿಸಲಾಗುವುದು. ಪುನರಾವರ್ತಿತ ತಪ್ಪಿಗೂ ರೂ. 1,500 ದಂಡ ವಿಧಿಸಿ, ಸದರಿ ಮೊತ್ತವನ್ನು ಭೂ ಕಂದಾಯ ಹಿಂಬಾಕಿಯಂತೆ ವಸೂಲಿ ಮಾಡಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *