ವಿದ್ಯಾರ್ಥಿಗಳು ಟೈಪಿಂಗ್ ಕಲಿಕೆಯೊಂದಿಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ವಿ.ರಘುನಾಥ್

ಚಾಮರಾಜನಗರ: ನಗರದ ಶ್ರೀ ವಾಣಿಜ್ಯ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಟೈಪಿಂಗ್ ಅನ್ನು ಏಕಾಗ್ರತೆಯಿಂದ ಕಲಿಯುವ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀ ಲಕ್ಷ್ಮೀ ಪಾಲಿಕ್ಲಿನಿಕ್ ಮಾಲೀಕರು ಹಾಗೂ ನಗರಸಭಾ ಮಾಜಿ ಸದಸ್ಯರಾದ ವಿ.ರಘುನಾಥ್ ತಿಳಿಸಿದರು.

ನಗರದ ಶ್ರೀ ವಾಣಿಜ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಟೈಪಿಂಗ್ ಕಲಿಯುವ ಮೂಲಕ ಸರ್ಕಾರಿ ಕೆಲಸವನ್ನು ಪಡೆದು ನಿಮ್ಮ ಸಂಸ್ಥೆಗೆ ಹಾಗೂ ನಿಮ್ಮ ಪೋಷಕರಿಗೆ ಉತ್ತಮ ಹೆಸರು ತರುವಂತಹ ಕೆಲಸ ಮಾಡಬೇಕು ಎಂದರು.

ಕಂಪ್ಯೂಟರ್‌ಗಳನ್ನು ನಿರ್ವಹಣೆ ಮಾಡಲು ಟೈಪಿಂಗ್ ಮೊದಲ ಮೆಟ್ಟಿಲು, ಇದನ್ನು ಶ್ರದ್ಧೆಯಿಂದ ಕಲಿತರೆ ಯಾವ ಕಂಪ್ಯೂಟರ್‌ಗಳನ್ನು ಸಹ ನಿರ್ವಹಣೆ ಮಾಡಬಹುದು. ೫೦ ವರ್ಷಗಳ ಹಿಂದೆ ನಾವು ಕಲಿಯಲು ಹೋಗುತ್ತಿದ್ದಾಗ ಸಾಕಷ್ಟು ಖುಷಿ ಇರುತ್ತಿತ್ತು. ನಾವು ಟೈಪಿಂಗ್ ಕ್ಲಾಸ್‌ಗಳಿಗಾಗಿ ಕಾಯುತ್ತಿದ್ದೆವು ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ಒಂದು ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ, ಸಾಕಷ್ಟು ನೋವು ನಲಿವು, ಕಷ್ಟಗಳಿರುತ್ತದೆ. ಅದನ್ನೆಲ್ಲಾ ಮೆಟ್ಟಿನಿಂತು ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿರುವ ಆರ್.ವಿ.ಮಹದೇವಪ್ಪ ಅವರರಿಗೆ ದೇವರು ಮತ್ತಷ್ಟು ಹೆಚ್ಚಿನ ಶಕ್ತಿ ನೀಡಲಿ ಇವರಿಂದ ಮತ್ತಷ್ಟು ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡುವ ಮೂಲಕ ಹಲವು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಲಿ ಎಂದು ಅವರನ್ನು ಶ್ಲಾಘಿಸಿದರು.

ಶ್ರೀ ವಾಣಿಜ್ಯ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಆರ್.ವಿ.ಮಹದೇವಪ್ಪ ಮಾತನಾಡಿ, 2026ರ ಜುಲೈ 20 ರಿಂದ ರಾಜ್ಯಾದ್ಯಂತ ವಾಣಿಜ್ಯ ಹಾಗೂ ಶಾರ್ಟ್‌ಹ್ಯಾಂಡ್ ಪರೀಕ್ಷೆಗಳು ನಡೆಯಲಿದ್ದು, ನಮ್ಮ ಸಂಸ್ಥೆಯಿಂದ 32 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಇವರೆಲ್ಲ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲಿ. ಸಾಕಷ್ಟು ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಾಗುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡುವ ಮೂಲಕ ಉತ್ತಮ ಅಂಕಗಳನ್ನು ಪಡೆದು, ವಿವಿಧ ಹುದ್ದೆಗಳನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ನಮ್ಮ ಸಂಸ್ಥೆಯ 75ನೇ ವರ್ಷದ ಸಂಭ್ರಮಾಚರಣೆಯನ್ನು ಮಾಡುವ ಉದ್ದೇಶಹೊಂದಿದ್ದು, ನಮ್ಮ ಸಂಸ್ಥೆಯ 179 ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಷ್ಟು ಮಂದಿಯನ್ನು 75ನೇ ವರ್ಷದ ಕಾರ್ಯಕ್ರಮಕ್ಕೆ ಕರೆತರುವ ಮೂಲಕ ನಗರದ ಜನತೆಯ ಸಹಕಾರದೊಂದಿಗೆ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುವ ಕನಸಿದೆ ಎಂದು ತಿಳಿಸಿದರು. ಉತ್ತಮ ಕಾರ್ಯಕ್ರಮವನ್ನು ಆಯೋಜಿಸುವ ಕನಸಿದೆ ಎಂದರು.

ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ, ಪ್ರವೇಶ ಪತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕಿ ಲತಾ, ಸಮಾಜ ಸೇವಕರಾದ ಮಲ್ಲೇಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *