ಸಭಿಕರ ಮನಸೂರೆಗೊಂಡ ಮಹಿಳೆಯರ ಡ್ಯಾನ್ಸ್

ಮೈಸೂರು: ಗೃಹಿಣಿಯರು, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಮೂಡಿ ಬಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ಹಾಗೂ ಅಮ್ಮ- ಮಕ್ಕಳ ಫ್ಯಾಷನ್ ಶೋ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಪಾತ್ರವಾದವು.

ನಗರದ ಜೆ.ಕೆ.ಮೈದಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ದಸರಾ ಉಪ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ತಾಯಿ- ಮಕ್ಕಳ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಪುತಲೀಬಾಯಿ ಮತ್ತು ಗಾಂಧೀಜಿ, ಪ್ರಭಾವತಿ ದೇವಿ‌ ಮತ್ತು ಮತ್ತು ಸುಭಾಷ್ ಚಂದ್ರ ಬೋಸ್, ಮಹಾರಾಣಿ ಮತ್ತು ರಾಜಕುಮಾರಿಯರು, ಕಾಂತರಾ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ಹಾಕಿರುವ ಉಡುಗೆ, ಕೊಡವ ಶೈಲಿ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಗೆ…ಹೀಗೆ ನಾನಾ ಶೈಲಿಯ ಉಡುಗೆಗಳನ್ನು ಧರಿಸಿದ ತಾಯಿ ಮತ್ತು ಮಕ್ಕಳ ರ್ಯಾಂಪ್ ವಾಕ್ ಎಲ್ಲರ ಗಮನ ಸೆಳೆಯಿತು.

ಈ ಕಾರ್ಯಕ್ರಮ ಕೇವಲ ಕಾರ್ಯಕ್ರಮವಾಗಿರದೆ ತಾಯಿ ಮಕ್ಕಳ ನಡುವಿನ ಸಂಬಂಧ ಹಾಗೂ ಆತ್ಮವಿಶ್ವಾಸವನ್ನು ಪ್ರತಿನಿಧಿಸುವುದಾಗಿತ್ತು.

ಗಮನ ಸೆಳೆದ ನೃತ್ಯ: ನಂಜನಗೂಡು ತಾಲೂಕು ಬಿಳಿಗೆರೆ ಯೋಜನೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಿ.ಚಂದ್ರಿಕಾ ನೇತೃತ್ವದಲ್ಲಿ ನಡೆಸಿಕೊಟ್ಟ ಕಾವಾಲಯ್ಯ…ಲುಂಗಿ ಡ್ಯಾನ್ಸ್…ಡೋಳು ಬಾಜೆ…ಮುಕ್ಕಾಬುಳ್ಳಾ.. ಸೇರಿದಂತೆ ಇತರೆ ಹಾಡುಗಳಿಗೆ ಸ್ಟೆಪ್ ಹಾಕುವ ಮೂಲಕ ಪ್ರೇಕ್ಷಕರ ಮನಗೆದ್ದರು. ಈ ಸಂದರ್ಭದಲ್ಲಿ ಸಭಿಕರಿಂದ ಬಂದ ಚಪ್ಪಾಳೆ, ಶಿಳ್ಳೆಮುಟ್ಟುವಂತಿತ್ತು. ನೃತ್ಯದಲ್ಲಿ
ಎಸಿಡಿಪಿಓ ಶ್ವೇತಾ, ಚಂದ್ರಿಕಾ. ಪಿ., ಭಾಗ್ಯಲಕ್ಷ್ಮಿ, ಕುಸುಮ, ನಂದಿನಿ, ಪುಟ್ಟಮ್ಮ, ಮಾನಸ, ಸೌಮ್ಯ, ಆಶಾ, ಜ್ಯೋತಿ, ಸುಪ್ರಿತಾ, ಚೇತನ ಭಾಗವಹಿಸಿದ್ದರು.

ನೃತ್ಯಕ್ಕೆ ಸಾಥ್ ನೀಡಿದ ಎಸಿಡಿಪಿಓ: ತಮ್ಮ ಕೈಕೆಳಗಿನ ಸಿಬ್ಬಂದಿ ಕಾರ್ಯಕ್ರಮ ನಡೆಸುತ್ತಿದ್ದರೆ, ಅವರ ಜವಾಬ್ದಾರಿ ನೋಡಿಕೊಳ್ಳುವುದು ಅಥವಾ ಅವರಿಗೆ ಬೇಕಾದ ಸಹಕಾರ ನೀಡುವುದು ಸಹಜ. ಆದರೆ, ಬಿಳಿಗೆರೆ ಯೋಜನೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಅವರು ವೇದಿಕೆಯ ಮೇಲೆ ಅವರ ಜೊತೆ ಸ್ಟೆಪ್ ಹಾಕುವ ಮೂಲಕ ಪ್ರಶಂಸೆ ಹಾಗೂ ಮೆಚ್ಚುಗೆಗೆ ಪಾತ್ರರಾದರು.

ಫ್ಯಾಷನ್ ಶೋ ವಿಜೇತರು: ತಾಯಿ ಸಹನಾ ಹಾಗೂ ಅವಳಿ ಮಕ್ಕಳಾದ ಅಲೈಕ್ಯ ಮತ್ತು ಆನರ್ಘ್ಯ(ಪ್ರಥಮ), ತಾಯಿ ಕೆ.ಆರ್.ಶಿಲ್ಪಾ ಮತ್ತು ಮಗಳು ಎಸ್. ಗಾನ್ವಿಕ(ದ್ವಿತೀಯ) ಅವರಿಗೆ ಬಹುಮಾನ ಹಾಗೂ ಫ್ಯಾಷನ್ ಶೋ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ನಮಗೆ ದ್ವಿತೀಯ ಬಹುಮಾನ ಬಂದಿದೆ. ಬಹಳ‌ ಖುಷಿಯಾಗುತ್ತಿದೆ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ತಾಯಿ-ಮಕ್ಕಳ ಫ್ಯಾಷನ್ ಶೋ ನಡೆಸುವ ಮೂಲಕ ನಮಗೆ ಭಾಗವಹಿಸಲು ಅವಕಾಶ ನಾಡಿಕೊಟ್ಟಂತಾಗಿದೆ.
ಕೆ.ಆರ್.ಶಿಲ್ಪಾ, ಕಾರ್ಯ, ನಂಜನಗೂಡು ತಾಲೂಕು.

Leave a Reply

Your email address will not be published. Required fields are marked *