ಚಾಮರಾಜನಗರ: ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕ್ರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿಂದು ರಾಷ್ಟ್ರೀಯ ಲೋಕ್ ಅದಾಲತ್ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಈ ವಿಷಯ ತಿಳಿಸಿದರು.
ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಸದುದ್ದೇಶದಿಂದ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ತಾಲೂಕು ಕಾನೂನು ಸೇವಾ ಸಮಿತಿಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಇದೇ ತಿಂಗಳ 19ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆದಿತ್ತು. ಕಳೆದ ಜುಲೈನಲ್ಲಿ ನಡೆದ ಲೋಕ್ ಅದಾಲತ್‍ನಿಂದ ಈ ಅದಾಲತ್‍ವರೆಗೆ ಅಂದರೆ ಕಡಿಮೆ ಅವಧಿಯಲ್ಲಿ 1,22,552 ರಾಜಿಯೋಗ್ಯ ಪ್ರಕರಣಗಳನ್ನು ಗುರುತಿಸಿ ತ್ವರಿತವಾಗಿ ಇತ್ಯರ್ಥ ಮಾಡಲಾಗಿದೆ ಎಂದರು.
ನ್ಯಾಯಾಲಯದ ಪ್ರಕರಣಗಳಲ್ಲಿ ಚಾಮರಾಜನಗರ ತಾಲೂಕಿನ 546, ಯಳಂದೂರು 386, ಕೊಳ್ಳೇಗಾಲ 1191 ಹಾಗೂ ಗುಂಡ್ಲುಪೇಟೆ ತಾಲೂಕಿನ 815 ಸೇರಿದಂತೆ ಒಟ್ಟು 2938 ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚಾಮರಾಜನಗರ ತಾಲೂಕಿನ 63301, ಯಳಂದೂರು 4898, ಕೊಳ್ಳೇಗಾಲ 17676 ಹಾಗೂ ಗುಂಡ್ಲುಪೇಟೆ ತಾಲೂಕಿನ 33709 ಸೇರಿದಂತೆ ಒಟ್ಟು 1,19,614 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಇತ್ಯರ್ಥಗೊಂಡಿರುವ ಒಟ್ಟಾರೆ 1,22,552 ಪ್ರಕರಣಗಳಿಂದ ದಂಡ ಹಾಗೂ ಪರಿಹಾರ ರೂಪದಲ್ಲಿ ಒಟ್ಟು 13,95,77,587 ರೂ. ಗಳನ್ನು ಸಂಗ್ರಹಿಸ(ರೆಕವರಿ)ಲಾಗಿದೆ ಎಂದು ಹೇಳಿದರು.
ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಗಂಡ-ಹೆಂಡತಿ ಒಂದುಗೂಡುವಿಕೆಯ ಒಂದು ಪ್ರಕರಣ, ಹಿರಿಯ ನಾಗರಿಕರ ಒಂದು ಪ್ರಕರಣ ಇತ್ಯರ್ಥ ಹಾಗೂ ಬಾಕಿ ಉಳಿದಿದ್ದ ಹಳೇ ಎರಡು ಪ್ರಕರಣ ಸೇರಿದಂತೆ ಒಟ್ಟು 4 ವಿಶೇಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಲೋಕ್ ಅದಾಲತ್ ಯಶಸ್ಸಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ವಕೀಲರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಅಬಕಾರಿ, ಕಂದಾಯ ಇಲಾಖೆ, ತಂಬಾಕು ನಿಯಂತ್ರಣ ಘಟಕ, ಬ್ಯಾಂಕ್ ಗಳು, ವಿಮಾ ಕಂಪನಿಗಳು, ಇತರೆ ಇಲಾಖೆಗಳ ಸಹಕಾರಕ್ಕೆ ಅಭಿನಂದನೆಗಳನ್ನು ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಮಸಮುದ್ರ ಪುಟ್ಟಸ್ವಾಮಿ ಅವರು ಮಾತನಾಡಿ ಜನಸಾಮಾನ್ಯರಿಗೆ ಇತ್ತೀಚೆಗೆ ಲೋಕ್ ಅದಾಲತ್ ಮಹತ್ವದ ಅರಿವು ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ವ್ಯಾಜ್ಯಪೂರ್ವ ಪ್ರಕರಣಗಳು ನ್ಯಾಯಾಲಯಕ್ಕೆ ದಾಖಲಾಗುವ ಮೊದಲೇ ಇತ್ಯರ್ಥಗೊಳ್ಳುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಇದರಿಂದ ಜನರ ಅಮೂಲ್ಯ ಸಮಯ, ಹಣ ಉಳಿತಾಯವಾಗಿ ಉಭಯ ಪಕ್ಷಕಾರರಲ್ಲಿ ಭಾಂಧವ್ಯ ಗಟ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಬಾರಿಯ ಲೋಕ್ ಅದಾಲತ್‍ಗೆ ಜಿಲ್ಲಾ ವಕೀಲರ ಸಂಘದಿಂದ ನಿರಂತರ ಸಹಕಾರ ನೀಡಲಾಗುವುದು ಎಂದರು.
ಬಳಿಕ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಒಂದು ಗ್ರಾಮವನ್ನು ‘ರಿಮೋಟ್ ವಿಲೇಜ್’ ಆಗಿ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕಾಗಿದೆ. ಜನಸಾಮಾನ್ಯರಿಗೆ ಪಿಂಚಣಿ, ಪಡಿತರ ಚೀಟಿ, ಪೋಡಿ ದಾಖಲೆ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸಂಬಂಧ ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿ ಗ್ರಾಮವನ್ನು ಗುರುತಿಸಲಾಗಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂ ಸೇವಕರು ಈಗಾಗಲೇ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
