ನಾಗಮಂಗಲ: ಬದುಕು ಕಟ್ಟಿಕೊಳ್ಳುವ ಯುವಕನೊಬ್ಬನ ಕನಸಿಗೆ ಆಸರೆಯಾಗುವುದು, ಆತನ ಬೆನ್ನಿಗೆ ನಿಂತು ಪ್ರೋತ್ಸಾಹಿಸುವುದು ನಿಜವಾದ ನಾಯಕನ ಗುಣ. ನಾಗಮಂಗಲದಲ್ಲಿ ಶುಕ್ರವಾರ ರಾತ್ರಿ ನಡೆದ ಒಂದು ಸಣ್ಣ, ಆದರೆ ಅತ್ಯಂತ ಹೃದಯಸ್ಪರ್ಶಿ ಘಟನೆ ಇದಕ್ಕೆ ಸಾಕ್ಷಿಯಾಯಿತು.
ನಾಗಮಂಗಲ ತಾಲೂಕಿನ ಅಳಿಸಂದ್ರ ಗ್ರಾಮದ ಯುವಕ ರೋಹಿತ್, ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು, ಜೀವನೋಪಾಯಕ್ಕಾಗಿ ಹೊಸ ಕಾರೊಂದನ್ನು ಖರೀದಿಸಿದ್ದರು.
ತನ್ನ ಬೆವರಿನ ಶ್ರಮದಿಂದ ಕೊಂಡ ಈ ಕಾರಿಗೆ, ತಾನು ಅತ್ಯಂತ ಪ್ರೀತಿಸುವ ಹಾಗೂ ಆರಾಧಿಸುವ ನಾಯಕ, ಸಚಿವ ಎನ್. ಚಲುವರಾಯಸ್ವಾಮಿ ಅವರಿಂದಲೇ ಶುಭ ಹಾರೈಕೆ ಪಡೆಯಬೇಕೆಂಬುದು ಆ ಯುವಕನ ಹೆಬ್ಬಯಕೆಯಾಗಿತ್ತು. ಅದಕ್ಕಾಗಿ ತನ್ನ ಹೊಸ ಕಾರಿನೊಂದಿಗೆ ನೆಚ್ಚಿನ ನಾಯಕನಿಗಾಗಿ ಆತ ಕಾದುನಿಂತಿದ್ದ.
ಅಂದು ಶುಕ್ರವಾರ ರಾತ್ರಿ. ಸತತ ನಾಗಮಂಗಲದ ಪ್ರವಾಸದಲ್ಲಿದ್ದ ಸಚಿವರು ಇಡೀ ದಿನದ ಓಡಾಟದಿಂದ ತೀವ್ರವಾಗಿ ದಣಿದಿದ್ದರು. ಆದರೆ, ತನ್ನನ್ನು ಹುಡುಕಿಕೊಂಡು ಬಂದ ಅಭಿಮಾನಿಯ ಕಣ್ಣಿನಲ್ಲಿದ್ದ ಭರವಸೆ ಮತ್ತು ಪ್ರೀತಿಯನ್ನು ಕಂಡ ಸಚಿವರ ದಣಿವು ಕ್ಷಣಾರ್ಧದಲ್ಲಿ ಮಾಯವಾಯಿತು.
ಬದುಕಿನ ಬಂಡಿ ಎಳೆಯಲು ಹೊಸ ಕಾರು ಖರೀದಿಸಿದ ಯುವಕನ ಬೆನ್ನು ತಟ್ಟಿ ಪ್ರೀತಿಯಿಂದ ಹರಸಿದ ಸಚಿವರು, ಕಾರಿನ ಮೇಲೆ “ಗುಡ್ ಲಕ್” ಎಂದು ತಮ್ಮ ಕೈಯಾರೆ ಬರೆದು ಹಸ್ತಾಕ್ಷರ ಹಾಕಿದರು.
ಕೇವಲ ಸಹಿ ಹಾಕಿದ್ದಷ್ಟೇ ಅಲ್ಲದೆ, “ನಿನ್ನ ಈ ಹೊಸ ಉದ್ಯಮ ಯಶಸ್ವಿಯಾಗಲಿ. ಭಗವಂತನ ಕೃಪೆಯಿಂದ ನಿನಗೆ ಶುಭ-ಲಾಭ ದೊರಕಿ, ಮುಂದೊಂದು ದಿನ ಇಂತಹ ನೂರಾರು ಕಾರುಗಳನ್ನು ಖರೀದಿಸುವ ಶಕ್ತಿಯನ್ನು ಆ ದೇವರು ನಿನಗೆ ಕರುಣಿಸಲಿ” ಎಂದು ಓರ್ವ ತಂದೆಯ ಸ್ಥಾನದಲ್ಲಿ ನಿಂತು ತುಂಬು ಹೃದಯದಿಂದ ಆಶೀರ್ವದಿಸಿದರು.
ರೋಹಿತ್ ಪಾಲಿಗೆ ಆ ಕಾರು ಈಗ ಕೇವಲ ಒಂದು ವಾಹನವಾಗಿ ಉಳಿದಿಲ್ಲ, ಅದು ತನ್ನ ನೆಚ್ಚಿನ ನಾಯಕನ ಆಶೀರ್ವಾದದೊಂದಿಗೆ ಶುರುವಾದ ‘ಬದುಕಿನ ಭರವಸೆಯ ರಥ’ವಾಗಿದೆ.
