ಚಾಮರಾಜನಗರ: ಸಂಸತ್ತು ಕೋಟ್ಯಾಂತರ ಜನರ ಧ್ವನಿ. ಸಂವಿಧಾನದ ಶಕ್ತಿ. ಪ್ರಜಾಪ್ರಭುತ್ವದ ಆಧಾರಸ್ತಂಭ. ಪ್ರಜಾಪ್ರಭುತ್ವ ಉಳಿದಿರುವುದು ಭವ್ಯ ಭಾರತದ ಯುವಕರು ಮತ್ತು ವಿದ್ಯಾರ್ಥಿಗಳ ಕೈಯಲ್ಲಿ ಇದೆ. ದೇಶದ ಸಮಗ್ರ ಕಾನೂನು ರೂಪಿಸಿ,ಸರ್ಕಾರದ ಕಾರ್ಯನಿರ್ವಹಣೆ,ಜನರ ಇಚ್ಛೆಗೆ ಅನುಗುಣವಾಗಿ ಸಮಸ್ಯೆಗಳ ನಿವಾರಣೆಯನ್ನು ಮಾಡಿ, ದೇಶವನ್ನು ಮುನ್ನಡೆಸುವುದೇ ಶಕ್ತಿಶಾಲಿ ಸಂಸತ್ತು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಚಾಮರಾಜನಗರ ಜಿಲ್ಲಾ ಮೈ ಭಾರತ್ ಯುವ ಕೇಂದ್ರ, ವಸತಿಯುಕ್ತ ಸರ್ಕಾರಿ ಪದವಿ ಕಾಲೇಜು, ಭೋಗಾಪುರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನೆರೆಹೊರೆಯ ಯುವ ಸಂಸತ್ತು ಕಾರ್ಯಕ್ರಮ ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಪ್ರಜಾಪ್ರಭುತ್ವದ ಜೀವಾಳವಾಗಿರುವ ಸಂಸತ್ತು ಅದರ ರಚನೆ, ಕಾನೂನು ರಚನೆ, ಹಣಕಾಸಿನ ಅಧಿಕಾರ, ಸರ್ಕಾರದ ಜವಾಬ್ದಾರಿ, ಚರ್ಚೆ, ಸಂವಾದಗಳು, ಸಂವಿಧಾನ ತಿದ್ದುಪಡಿ, ನ್ಯಾಯಾಂಗದ ಮೇಲ್ವಿಚಾರಣೆ ಮತ್ತು ಪ್ರಜಾಪ್ರಭುತ್ವವನ್ನು ಸಮಗ್ರವಾಗಿ ಸದಾ ಕಾಲ ಬಲಪಡಿಸುವ ಶಕ್ತಿ ಸಂಸತ್ತಿಗೆ ಇದೆ.
ಭಾರತ ಶೇಕಡ 51ಕ್ಕೂ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ್ರ.ಇಡೀ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಶಕ್ತಿಯೇ ಯುವಕರು ಮತ್ತು ವಿದ್ಯಾರ್ಥಿಗಳು. ಸಂಸತ್ತಿನ ಸಮಗ್ರ ಪರಿಚಯ, ಸಂವಿಧಾನದ ಹಕ್ಕುಗಳು ಮತ್ತು ಕರ್ತವ್ಯಗಳ ಅಧ್ಯಯನ, ದೇಶದ ಸಮಸ್ತ ಸಮಸ್ಯೆಗಳು, ಅದರ ನಿವಾರಣೆಯ ಚಿಂತನಾಶೀಲ ದೃಷ್ಟಿಕೋನ ನಮ್ಮೆಲ್ಲರಿಗೂ ಅಗತ್ಯವಿದೆ. ಸಂವಿಧಾನ ನಮಗೆ ಸರ್ವವನ್ನು ನೀಡಿದೆ. ಶಿಕ್ಷಣ,ವಿಜ್ಞಾನ, ತಂತ್ರಜ್ಞಾನ, ಕ್ರೀಡೆ,ಸಮಾಜ ಸೇವೆ,ಕೃಷಿ, ಕೈಗಾರಿಕೆ, ಮುಂತಾದ ನೂರಾರು ಕ್ಷೇತ್ರಗಳ ಸಮಗ್ರ ಸಾಧನೆ ಮಾಡಿ ರಾಷ್ಟ್ರವನ್ನು ಅಭಿವೃದ್ಧಿಯ ಪಥದಲ್ಲಿ ಕಟ್ಟುವ ಕಾರ್ಯ ನಮ್ಮದಾಗಬೇಕು. ಪ್ರತಿ ರಾಷ್ಟ್ರದಲ್ಲೂ ನಿರುದ್ಯೋಗ ಸಮಸ್ಯೆ,ಬಡತನ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಶಿಕ್ಷಣದ ಅಸಮಾನತೆ, ಮಾದಕ ವಸ್ತುಗಳ ಸಮಸ್ಯೆಗಳನ್ನು ಕಾಣಬಹುದು.
ಈ ಸಮಸ್ಯೆಗಳಿಗೆ ಪರಿಹಾರವೇ ಸಂಸತ್ತಿನ ಜವಾಬ್ದಾರಿಯತವಾದ ನಿರ್ವಹಣೆ ಮತ್ತು ಶಕ್ತಿಶಾಲಿ ಆಡಳಿತದ ಕಾರ್ಯ. ಪ್ರತಿಯೊಬ್ಬರು ಜಾತಿ, ಮತ, ಧರ್ಮ,ಭಾಷೆ,ಪ್ರಾಂತ್ಯವನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ಉತ್ತಮವಾದ ಗುಣವನ್ನು ಬೆ ಳಸಿಕೊಂಡು ರಾಷ್ಟ್ರವನ್ನು ಮುನ್ನಡೆಸಬೇಕು.
ಯುವ ಸಂಸತ್ತಿನ ಈ ಸ್ಪರ್ಧೆಗಳು ಪ್ರತಿಯೊಬ್ಬರಲ್ಲೂ ಪ್ರಜಾಪ್ರಭುತ್ವದ ಅರಿವು, ವಾಕ್ಚಾತುರ್ಯ, ಶಿಸ್ತು, ದೇಶದ ಆಡಳಿತದ ಜ್ಞಾನ, ವಾದ ವಿವಾದ, ಚರ್ಚೆ, ಸ್ಪಷ್ಟಪರಿಣಾಮಕಾರಿಯಾದ ಭಾಷಣ ಕಲೆ, ವಿಷಯಗಳ ಅಧ್ಯಯನ, ವಿರೋಧ ಪಕ್ಷದ ಅಭಿಪ್ರಾಯಗಳು ಪ್ರಶ್ನಿಸುವ ಸಾಮರ್ಥ್ಯವನ್ನು ಹಾಗೂ ಸಂಸದೀಯ ನಿಯಮಾವಳಿಗಳನ್ನು ತಿಳಿಯುವ ಪ್ರಯತ್ನಕ್ಕೆ ಯುವ ಸಂಸತ್ತಿನ ಸ್ಪರ್ಧೆಗಳು ಸ್ಪೂರ್ತಿಯನ್ನು ತುಂಬುತ್ತದೆ. ಪ್ರಜಾಪ್ರಭುತ್ವದ ಶಕ್ತಿ ಜನರಲ್ಲಿದೆ. ಜನರ ಧ್ವನಿ ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತದೆ. ಎಂಬ ನುಡಿಯಂತೆ ಭಾರತದ ಹಲವಾರು ಶ್ರೇಷ್ಠ ಸಂಸದೀಯ ಪಟುಗಳು ಭಾರತವನ್ನು ಜಗದ್ಗುರುವಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಿರುವುದು ಹೆಮ್ಮೆಯಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತರಾಗಿ ಶಿಕ್ಷಣದಲ್ಲಿ ಆಸಕ್ತಿ ತೋರಿಸಿ ಶ್ರದ್ಧೆಯಿಂದ ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಋಗ್ವೇದಿ ತಿಳಿಸಿದರು.
ಉದ್ಘಾಟನೆಯನ್ನು ಮೈ ಭಾರತ್ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಶಾಲೋಮ್ ಫಿಲಿಪ್ ಥಾಮಸ್ ಘಾಟಿಸಿ ಮಾತನಾಡಿ ಮೈ ಭಾರತ್ ಯುವ ಕೇಂದ್ರ ಇಡೀ ದೇಶದ ಯುವಕರನ್ನು ಸಂಘಟಿಸಿ ಅವರಲ್ಲಿ ಭಾವೈಕ್ಯತೆ ಏಕತೆ ಕ್ರೀಡೆ ಮತ್ತು ಸಾಮಾಜಿಕ ಬೆಳವಣಿಗೆಯ ದೃಷ್ಟಿಕೋನವನ್ನು ಬೆಳೆಸುವುದು ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಮೈ ಭಾರತ್ ಯುವ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಯುವಕರು ಮೈ ಭಾರತ್ ಸದಸ್ಯರಾಗಿ ಕೇಂದ್ರ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ. ಬಿ. ದೇವರಾಜು ಮಾತನಾಡಿ ಸದೃಢ ಭಾರತಕ್ಕಾಗಿ ಪ್ರಜಾಪ್ರಭುತ್ವವನ್ನು ಬಲಿಷ್ಠ ಗೊಳಿಸಬೇಕು. ಭಾರತದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಜಾಗೃತಿ ಮೂಡಿಸಬೇಕು. ಯುವಶಕ್ತಿ ವ್ಯಸನಗಳಿಗೆ ಬಲಿಯಾಗದೆ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಂಡು ಮುನ್ನಡೆಯಬೇಕು ಎಂದರು.
ಐ ಕ್ಯೂ ಏ ಸಿ ಸಂಚಾಲಕ ಪ್ರೊ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ನೆರೆಹೊರೆ ಯುವ ಸಂಸತ್ತು ನಶಾ ಮುಕ್ತ ಭಾರತದ ಬಗ್ಗೆ ವಿವರಿಸಿದರು. ಮೈ ಭಾರತ್ ಯುವ ಕೇಂದ್ರದ ಸಹನ, ಸರ್ಕಾರಿ ಪದವಿ ಕಾಲೇಜಿನ ಪ್ರೊ. ರಂಗಸ್ವಾಮಿ, ಪ್ರೊ ರಮೇಶ್ ಬಾಬು ಉಪಸ್ಥಿತರಿದ್ದರು.