ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ವಿರೋಧಿಗಳಿಗೆ ಉತ್ತರ: ಒಟ್ಟಾಗಿ ಕೆಲಸ ಮಾಡಲು ಕೈಜೋಡಿಸಿ ಎಂದ ಸಚಿವರು

ರಾಹುಲ್ ಗಾಂಧಿಗೆ ಅಧಿಕಾರದ ಆಸೆಯಿದ್ದಿದ್ದರೆ ಎಂದೋ ಪ್ರಧಾನಿಯಾಗುತ್ತಿದ್ದರು: ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ, ಸೆ.26: ರಾಹುಲ್ ಗಾಂಧಿ ಅವರಿಗೆ ಅಧಿಕಾರದ ಆಸೆ ಇದ್ದಿದ್ದರೆ, ಎಂದೋ ಮನಮೋಹನ್ ಸಿಂಗ್ ಅವರಿಂದ ರಾಜೀನಾಮೆ ಪಡೆದು ಪ್ರಧಾನಿಯಾಗಬಹುದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಕುಮಾರ್ ಕೊಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ಗಿರುವಷ್ಟು ಭವ್ಯ ಇತಿಹಾಸ ಬೇರೆ ಯಾವ ಪಕ್ಷಕ್ಕೂ ಇಲ್ಲ. ದೇಶ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದು ಮಾತ್ರವಲ್ಲದೆ, ದೇಶಕ್ಕೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿಯೂ ಕಾಂಗ್ರೆಸ್‌ನ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗಾಗಿ ಅನೇಕ ನಾಯಕರು ದುಡಿದಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಶ್ರಮ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿದ್ದು, ಇಲ್ಲಿಂದಲೇ ದೇಶದ ಭದ್ರ ಬುನಾದಿಗೆ ಪಕ್ಷ ದುಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಏಳು ಮಂದಿ ಮತ್ತೊಂದು ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ವೇಳೆ ಇಡೀ ಕಾಂಗ್ರೆಸ್ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿತ್ತು. ಎಂದಿಗೂ ಕಾಂಗ್ರೆಸ್ ನನ್ನನ್ನು ಹೊರಗಿನವನಂತೆ ಕಂಡಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ, ನನ್ನ ಬೆನ್ನಿಗೆ ನಿಂತಿದ್ದರು ಎಂದು ಅವರು ಇದೇ ವೇಳೆ ಸ್ಮರಿಸಿಕೊಂಡರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಸರ್ಕಾರದ ಗ್ಯಾರಂಟಿಗಳೊಂದಿಗೆ ಪಕ್ಷದ ಕಾರ್ಯಕರ್ತರು ಒಗ್ಗೂಡಿ, ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿಯೂ ಗೆಲುವು ಸಾಧಿಸಬೇಕು. ಆಗಷ್ಟೇ ಪಕ್ಷದ ಶ್ರಮಿಕರಿಗೆ ಅಧಿಕಾರ ಸಿಗಲಿದೆ. ಜಿಲ್ಲೆಯ ಎಲ್ಲ ಕಾರ್ಯಕರ್ತರು ಕೈಗೊಳ್ಳುವ ನಿರ್ಣಯಕ್ಕೆ ನಾವು ಶಕ್ತಿ ತುಂಬುತ್ತೇವೆ ಹಾಗೂ ಎಲ್ಲರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ನೂತನ ಜಿಲ್ಲಾಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ನಿಕಟಪೂರ್ವ ಅಧ್ಯಕ್ಷರು ಸಹ ನೂತನ ಅಧ್ಯಕ್ಷರಿಗೆ ಸಾಥ್ ನೀಡಬೇಕು. ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಅಧಿಕಾರ ನೀಡಬೇಕು ಎಂಬುದು ಕಾಂಗ್ರೆಸ್‌ನ ಗುರಿಯಾಗಿದ್ದು, ಎಲ್ಲರಿಗೂ ಅವಕಾಶ ನೀಡುವ ಕೆಲಸ ನಡೆಯುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೇ ಪಕ್ಷವನ್ನು ಸಂಘಟಿಸುವ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದರು.

ಪೊಳ್ಳು ಮಾತಿನಲ್ಲಿ ಕುಮಾರಸ್ವಾಮಿ ಫೇಮಸ್

ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಲೋಕಸಭಾ ಸದಸ್ಯರು ಪೊಳ್ಳುಪೊಳ್ಳಾಗಿ ಮಾತನಾಡುತ್ತಾರೆ. ಅವರಷ್ಟು ಪೊಳ್ಳಾಗಿ ನಾವಂತೂ ಉತ್ತರ ನೀಡಲು ಸಾಧ್ಯವಿಲ್ಲ. ಪೊಳ್ಳು ಮಾತನಾಡುವುದರಲ್ಲಿ ಅವರು ಇಡೀ ದೇಶದಲ್ಲೇ ಫೇಮಸ್ ಆಗಿದ್ದಾರೆ. ಅವರಿಗೆ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕವೇ ತಕ್ಕ ಉತ್ತರ ನೀಡಬೇಕಿದೆ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಕಚೇರಿ ಸಿದ್ಧ

ಮುಂದಿನ ವಿಧಾನಸಭೆ ಚುನಾವಣೆಯೊಳಗೆ ನೂತನ ಕಾಂಗ್ರೆಸ್ ಕಚೇರಿಯನ್ನು ನಿರ್ಮಿಸಲು ಶ್ರಮಿಸುತ್ತಿದ್ದು, ಶತಾಯಗತಾಯ ಸದ್ಯದಲ್ಲೇ ಭೂಮಿಪೂಜೆ ನೆರವೇರಲಿದೆ. ಕಚೇರಿ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವವರ ಹೆಸರನ್ನು ಕಚೇರಿಯೊಳಗಿನ ನಾಮಫಲಕದಲ್ಲಿ ಅಳವಡಿಸಲಾಗುವುದು ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರಸ್ವಾಮಿ, ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ನೂತನ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ,ಕೆಎಂಎಫ್ ನಿರ್ದೇಶಕ ಅಪ್ಪಾಜಿಗೌಡ,ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *