ಜೀವನ ಸಾರ್ಥಕತೆಗೆ ಬಸವಣ್ಣನವರ ವಚನಾಮೃತಗಳನ್ನು ಅಳವಡಿಸಿಕೊಳ್ಳಿ : ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಮಾನವ ಬದುಕಿನ ಜೀವನ ಸಾರ್ಥಕತೆಗೆ ಬಸವಣ್ಣನವರ ವಚನಾಮೃತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

   ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ 893ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಬಸವಣ್ಣನವರು 12ನೇ ಶತಮಾನದ ಪ್ರಮುಖ ವಚನಕಾರರು. ವಚನ ಸಾಹಿತ್ಯ ಮೌಲ್ಯವನ್ನು ಹೆಚ್ಚಿಸಿದವರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ ಎಂದು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ವಚನಾಮೃತವನ್ನು ಉಣಬಡಿಸಿದರು. ಅನುಭವ ಮಂಟದಲ್ಲಿ ಎಲ್ಲಾ ವರ್ಗದ ಜನರನ್ನೂ ಒಗ್ಗೂಡಿಸಿ ಸಾಮಾಜಿಕ, ಸಾಂಸ್ಕøತಿಕ ಚಿಂತನೆ, ವಿಚಾರಧಾರೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾದರು. ಇದನ್ನು ಮನಗಂಡ ಸರ್ಕಾರವು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೋಷಿಸಿ ಗೌರವ ಸಲ್ಲಿಸಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

  ಗುಂಡ್ಲುಪೇಟೆ ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನುಭವ ಮಂಟಪದ ಸ್ಥಾಪಿಸಿ ಎಲ್ಲರಿಗೂ ಎಮ್ಮ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲು ಸಮಾನ ಅವಕಾಶಗಳನ್ನು ನೀಡಿದ ಬಸವಣ್ಣನವರ ಮೌಲ್ಯಯುತ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಸಮಾಜದಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ ಬದುಕು ಸಾಗಿಸಲು ಬಸವಣ್ಣನವರ ವಚನಗಳ ಸಾರ-ಸಂದೇಶಗಳು ದಾರಿದೀಪವಾಗಿದೆ ಎಂದರು. 

  ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ 12ನೇ ಶತಮಾನದಲ್ಲಿದ್ದ ಬಡವ-ಬಲ್ಲಿದ, ಮೇಲು-ಕೀಳು, ಮೂಢನಂಬಿಕೆ. ಕಂದಾಚಾರ, ಕಟ್ಟುಪಾಡುಗಳನ್ನು ತೊಡೆದುಹಾಕಿ ಸಮಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಮುಂದಾಗಿದ್ದರು. ಸಮಾಜದಲ್ಲಿ ಮಹಿಳೆ, ಪುರುಷ ಎಲ್ಲರೂ ಸಮಾನರೆಂದು ಪ್ರತಿಪಾದಿಸಿದರು. ಬಸವಣ್ಣನವರ ಕಾಯಕವೇ ಕೈಲಾಸ, ದಾಸೋಹ ಪರಿಕಲ್ಪನೆಯನ್ನು ಅಕ್ಷರ ಹಾಗೂ ಅನ್ನದಾಸೋಹ ಜಾರಿಗೊಳಿಸುವ ಮೂಲಕ ರಾಜ್ಯಸರ್ಕಾರವು ಅಳವಡಿಸಿಕೊಂಡಿದೆ ಎಂದರು.

  ದಯೆ ಇಲ್ಲದ ಧರ್ಮ ಯಾವುದು ಇಲ್ಲ, ಎಲ್ಲಾ ಧರ್ಮಗಳ ಸಾರವು ಒಂದೇ. ಮಾನವಕುಲದ ಒಳಿತಿನ  ಪರಮ ಉದ್ದೇಶವಾಗಿದೆ. ಶಾಂತಿಪ್ರಿಯ ಭಾರತ ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲಾ ದಾರ್ಶನಿಕರು, ಸಂತರು ತಮ್ಮ ಚಿಂತನೆಗಳನ್ನು ಬಿತ್ತಿಹೋಗಿದ್ದಾರೆ. ಅವರ ತತ್ವ ಸಿದ್ದಾಂತಗಳಿಂದಲೇ ನಾವೆಲ್ಲರೂ ನೆಮ್ಮದಿಯುತ ಜೀವನ ನಡೆಸುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಬಸವಣ್ಣನ ಅನುಯಾಯಿ ಆಗಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ದಿನ ಬಸವ ಜಯಂತಿಯೇ ಆಗಿತ್ತು ಎಂದು ಮರಿಸ್ವಾಮಿ ಅವರು ಹೇಳಿದರು.

  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮಿಜೀ ಅವರು ಮಾತನಾಡಿದ ಜಿಲ್ಲಾಡಳಿತವು ಬಸವಣ್ಣನವರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತಲು ವಿಚಾರಸಂಕಿರಣ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾವೆಲ್ಲರೂ ಬಸವಾದಿ ಶರಣರ ತತ್ವ ಸಂದೇಶಗಳನ್ನು ಪಾಲಿಸಬೇಕು. ಮನುಷ್ಯನೇ ದೇವರಾಗುವ ಪರಿಕಲ್ಪನೆ ನೀಡಿದ ಬಸವಣ್ಣನವರ ತತ್ವಸಿದ್ದಾಂತಗಳನ್ನು ಅರಿಯದ ಜನರು ದುಶ್ಚಟಗಳಿಂದ ದೇಹಾರೋಗ್ಯ ಹಾಳುಮಾಡಿಕೊಳ್ಳ್ಳುತ್ತಿರುವುದು ವಿಪರ್ಯಾಸವಾಗಿದೆ. ಪ್ರತಿಯೊಬ್ಬರು ಸಂಸ್ಕಾರಯುತ ಬದುಕು ಕಟ್ಟಿಕೊಳ್ಳುವ ಮೂಲಕ ಬಸವಾದಿ ಶರಣರ ತತ್ವಗಳಿಗೆ ಶರಣಾಗಬೇಕು ಎಂದರು.  

  ಹರವೆ ವಿರಕ್ತ ಮಠದ ಸರ್ಪಭೂಷಣಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದರು. ಸಂಸ್ಕøತಿ ಚಿಂತಕರಾದ ಪೃಥ್ವಿರಾಜ್ ಹಾಲಹಳ್ಳಿ ಹಾಗೂ ಬಸವತತ್ವ ಪ್ರಚಾರಕರಾದ ಎಲ್. ಬಸಪ್ಪ ಬೊಮ್ಮಲಾಪುರ ಬಸವಣ್ಣ ಅವರು ಮುಖ್ಯ ಭಾಷಣ ಮಾಡಿ ಬಸವಣ್ಣನವರ ಚಿಂತನೆಗಳನ್ನು ಪ್ರಸ್ತುತಪಡಿಸಿದರು.  

  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ನಗರಾಭಿವೃದ್ಧಿ ಕೋಶ ಯೋಜನಾ ನಿದೇಶಕರಾದ ವೆಂಕಟೇಶ್, ಕನ್ನಡ ಮತ್ತು ಸಂಸ್ಕøತಿ ಸಹಾಯಕ ನಿರ್ದೇಶಕ ರಾಜು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಮುಡ್ಲುಪುರ ನಂದೀಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ವೇದಿಕೆಯಲ್ಲಿ ಭಜನಾ ಕಲಾತಂಡಗಳಿಂದ ವಚನಗಾಯನ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *