ಚಾಮರಾಜನಗರ: ಬರ ಪರಿಸ್ಥಿತಿ, ಅತಿವೃಷ್ಠಿ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಗೆ ತೆರಳಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದರು.
ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ಚಾಮರಾಜನಗರ ತಾಲೂಕಿನ ಹರವೆ, ಮಲೆಯೂರು, ಗುಂಡ್ಲುಪೇಟೆ ತಾಲೂಕಿನ ನಿಟ್ರೆ, ಸೀಗೆವಾಡಿ, ಕುಲಗಾಣ, ರಂಗನಾಥಪುರ, ಪರಮಾಪುರ, ಬಲಚವಾಡಿ, ಕೊಡಗಾಪುರ, ಗ್ರಾಮಗಳಲ್ಲಿ ಬೆಳೆ ವೀಕ್ಷಣೆ ಮಾಡಿದರು.
ನೀರಿನ ಕೊರತೆಯಿಂದ ಒಣಗಿ ಹೋಗಿರುವ ಜೋಳ, ಸೂರ್ಯಕಾಂತಿ, ಅಲಸಂದೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆಯಿಲ್ಲದೆ ಹಾಗೂ ನೀರಿನ ಅಭಾವದಿಂದ ನಾವು ಹಾಕಿರುವ ಬೆಳೆ ಒಣಗಿದೆ. ಕಷ್ಟಪಟ್ಟು ಬಿತ್ತನೆ ಮಾಡಿದ ನಮಗೆ ಫಸಲು ಕೈಗೆ ಸಿಕ್ಕಿಲ್ಲ. ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ನಮ್ಮ ನೆರವಿಗೆ ಸ್ಪಂದಿಸಬೇಕೆಂದು ಗ್ರಾಮಸ್ಥರು, ರೈತರು ಮನವಿ ಮಾಡಿದರು.
ಮಲೆಯೂರು ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಿದ ವೇಳೆ ಸ್ಥಳೀಯರು ಬೆಳೆಗೆ ನೀರು ಇಲ್ಲವಾಗಿದೆ, ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು, ಜಾನುವಾರುಗಳ ಮೇವಿಗೆ ಕೊರತೆ ಕಾಡುತ್ತಿದೆ. ಹಣ ಕೊಟ್ಟು ಮೇವು ಖರೀದಿಸುತ್ತಿದ್ದೇವೆ. ಗೋಶಾಲೆಗಳನ್ನು ಹೆಚ್ಚು ತೆರೆದು ಅನುಕೂಲ ಮಾಡಿಕೊಡಬೇಕೆಂದು ಕೋರಿದರು.
ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಮಳೆ, ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ವರದಿ ಮಾಡಲಾಗುತ್ತದೆ. ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರದ ಕ್ರಮಗಳನ್ನು ವಹಿಸಲಿದೆ. ಗ್ರಾಮಗಳಲ್ಲಿ ಗೋಶಾಲೆ ತೆರೆಯುವ ಹಾಗೂ ಮೇವು ಪೂರೈಕೆಗೂ ಚರ್ಚಿಸಿ ಅಗತ್ಯ ಕ್ರಮ ವಹಿಸಲಿದ್ದೇವೆ. ನಿಮ್ಮ ಎಲ್ಲ ಸಂಕಷ್ಟ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.
ರಂಗನಾಥಪುರದಲ್ಲಿಯೂ ಅಹವಾಲು ಆಲಿಸಿದ ಸಚಿವರಿಗೆ ಸೂರ್ಯಕಾಂತಿ, ಜೋಳ, ಅಲಸಂದೆ, ಇನ್ನಿತರ ಬೆಳೆಗಳು ನೀರಿಲ್ಲದೆ ಒಳಗಿ ಹೋಗಿದ್ದು, ಪರಿಹಾರ ನೀಡುವಂತೆ ಜನತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ನಿಮ್ಮ ನೆರವಿಗೆ ಬರಲಿದ್ದೇವೆ ಎಂದು ಭರವಸೆ ನೀಡಿದರು. ಬೆಳೆಗಳಿಗೆ ವಿಮೆಯಂತಹ ಸೌಲಭ್ಯಗಳ ಬಗ್ಗೆ ಹೆಚ್ಚು ತಿಳುವಳಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಎಷ್ಟು ಕೊಳವೆಬಾವಿಗಳು ಪ್ರಸ್ತುತ ನೀರು ಒದಗಿಸಲು ಬಳಕೆಯಾಗುತ್ತಿವೆ. ಇನ್ನು ಎಷ್ಟು ಸಂಖ್ಯೆಯಲ್ಲಿ ಕೊಳವೆಬಾವಿಗಳ ಅಗತ್ಯವಿದೆ ಎಂಬುದನ್ನು ಕೂಡಲೇ ಪರಿಶೀಲಿಸಿ ನೀರು ಪೂರೈಸಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಸೀಗೆವಾಡಿ ಗ್ರಾಮದಲ್ಲಿಯೂ ಬೆಳೆ ವೀಕ್ಷಣೆಯ ಬಳಿಕ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸ್ಥಳೀಯರ ಕುಂದು ಕೊರತೆಗಳನ್ನು ವಿಚಾರಿಸಿದರು. ಪರಮಾಪುರದಲ್ಲಿಯೂ ಒಣಗಿ ಹೋಗಿದ್ದ ಬೆಳೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಇನ್ನಿತರ ಮನವಿಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೊರತುಪಡಿಸಿ ಲಭ್ಯವಿರುವ ಬೋರ್ ವೆಲ್ ಗಳನ್ನು ರೀಡ್ರಿಲ್, ಹೊಸದಾಗಿ ಮತ್ತೆ ಕೊಳವೆಬಾವಿಗಳನ್ನು ಕೊರೆಸುವ ಕ್ರಮಗಳಿಂದ ಪರಿಹಾರ ಕೈಗೊಳ್ಳಲಾಗುವುದು. ಜಾನುವಾರುಗಳ ಮೇವು, ಗೋಶಾಲೆಯ ವ್ಯವಸ್ಥೆ ಮಾಡಲು ಕ್ರಮ ವಹಿಸಲಿದ್ದೇವೆ ಎಂದರು.
ಶಾಸಕರಾದ ಹೆಚ್.ಎಸ್. ಗಣೇಶ್ ಪ್ರಸಾದ್ ಅವರು ಮಾತನಾಡಿ ಕ್ಷೇತ್ರದಲ್ಲಿ ಮಳೆ ಕೊರತೆಯಿದೆ. ಬೆಳೆ ಹಾನಿಯಾಗಿರುವುದನ್ನು ವೀಕ್ಷಣೆ ಮಾಡಿದ್ದೇವೆ. ಜನರ ನೆರವಿಗೆ ಎಲ್ಲ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಎಲ್ಲ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ನಿಮ್ಮ ಸಮಸ್ಯೆಗಳ ಅರಿವು ನಮಗೆ ಸಂಪೂರ್ಣವಿದೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದರು.
ಗ್ರಾಮಗಳ ಪರಿವೀಕ್ಷಣೆ ಬಳಿಕ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಪ್ರಸ್ತುತ ತಾಲೂಕಿನಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳು ಮುಂಬರುವ ದಿನಗಳಲ್ಲಿ ಮಳೆ ಬೀಳದಿದ್ದರೆ ಮತ್ತೆ ಎಷ್ಟು ಗ್ರಾಮಗಳು ನೀರಿನ ತೊಂದರೆ ಎದುರಿಸಲಿವೆ ಎಂಬ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು. ಕುಡಿಯುವ ನೀರಿಗೆ ಯಾವುದೇ ಅನಾನುಕೂಲವಾಗದಂತೆ ಎಲ್ಲ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗೋಶಾಲೆಗಳ ಅಗತ್ಯತೆ ಬಗ್ಗೆ ಸ್ಥಳ ಪರಿಶೀಲಿಸಬೇಕು. ಜಾನುವಾರುಗಳ ಮೇವು ಪೂರೈಕೆ, ಇನ್ನಿತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ತುರ್ತಾಗಿ ಕಾರ್ಯೊನ್ಮುಖರಾಗುವಂತೆ ಸೂಚಿಸಿದರು.
ಶಾಸಕರಾದ ಹೆಚ್.ಎಸ್. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Related