ಬರ ಹಿನ್ನೆಲೆ : ಜಿಲ್ಲೆಗೆ 25 ಸಾವಿರ ಮೇವಿನ ಕಿಟ್ ವಿತರಣೆಗೆ ಕ್ರಮ-ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ, ಸೆಪ್ಟೆಂಬರ್ 19 (ಕರ್ನಾಟಕ ವಾರ್ತೆ):- ಜಿಲ್ಲೆಯ ಐದು ತಾಲೂಕುಗಳು ಬರ ಪೀಡಿತವಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಮೇವಿಗೆ ಅಭಾವ ಉಂಟಾಗದಿರಲು 25 ಸಾವಿರ ಮೇವಿನ ಕಿಟ್‌ಗಳನ್ನು ಜಿಲ್ಲೆಗೆ ವಿತರಿಸಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಇನ್ನೂ 20 ಸಾವಿರ ಮೇವಿನ ಕಿಟ್‌ಗಳನ್ನು ಸಹ ನೀಡಲಾಗುತ್ತದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಹಲವು ಭಾಗಗಳಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕಾರಣದಿಂದ ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು 25 ಕೋಟಿ ರೂ. ನೀಡಲಾಗಿದೆ. ಮೇವಿನ ಸಮಸ್ಯೆ ನೀಗಿಸಲು ಮೇವಿನ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಮೇವಿನ ಕಿಟ್ ಗಳನ್ನು ವಿತರಿಸುತ್ತಿದ್ದು, ಇದನ್ನು ಬಳಸಿಕೊಂಡು ದನ ಕರುಗಳಿಗೆ ಮೇವು ಬೆಳೆದುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಪ್ರಸ್ತುತ ಬರ ಇರುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ಕೊಡಲಾಗಿದೆ. ನೀರಿನ ಲಭ್ಯತೆ ಇರುವ ಕಡೆ ಕೊಳವೆಬಾವಿ ಇನ್ನಿತರ ಪರ್ಯಾಯ ವ್ಯವಸ್ಥೆಗಳ ಮೂಲಕ ಅಭಾವ ಪೀಡಿತ ಪ್ರದೇಶಗಳಲ್ಲಿ ನೀರು ಒದಗಿಸಲಾಗುತ್ತಿದೆ. ಈಗಾಗಲೇ ಲಭ್ಯವಿರುವ ಹಣವನ್ನು ಬರ ಪರಿಹಾರ ಕಾಮಗಾರಿಗಳಿಗೆ ತುರ್ತಾಗಿ ಬಳಸುವಂತೆ ಸೂಚಿಸಲಾಗಿದೆ. ಜನರ ನೆರವಿಗೆ ಸರ್ಕಾರ ಬದ್ದವಾಗಿದೆ ಎಂದರು.

ಜನರ ಬಳಿ ತೆರಳಿ ಅವರ ಮನೆ ಬಾಗಿಲಿನಲ್ಲಿಯೇ ಸಮಸ್ಯೆ ಆಲಿಸಿ ಪರಿಹರಿಸುವ ಉದ್ದೇಶದಿಂದ ಸರ್ಕಾರ ಮಹತ್ವಾಕಾಂಕ್ಷಿ ಪ್ರಜಾಸೇವೆ ಆಂದೋಲನ ಸಭೆಯನ್ನು ನಡೆಸುತ್ತಿದೆ. ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನರ ಕುಂದು ಕೊರತೆ ಆಲಿಸಲಾಗುತ್ತಿದೆ. ಅಲ್ಲದೇ ಇನ್ನಿತರ ಶನಿವಾರಗಳಂದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಸಭೆ ನಡೆಯುತ್ತಿದೆ ಎಂದರು.

ಯಾವುದೇ ಇಲಾಖೆಗಳಿಗೆ ಜನರು ಅಲೆದಾಡಬಾರದು. ಜನ ಇರುವಲ್ಲಿಯೇ ಹೋಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು. ಇದಕ್ಕಾಗಿಯೇ ನಾವೆಲ್ಲರೂ ಇದ್ದೇವೆ. ಅಧಿಕಾರಿಗಳು ಜನತೆಯ ಅಹವಾಲು, ಕುಂದು ಕೊರತೆಗಳಿಗೆ ಶೀಘ್ರ ಪರಿಹಾರ ನೀಡಬೇಕು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ಜನರ ಸಮಸ್ಯೆ ಕೇಳಿ ಪರಿಹರಿಸುವ ಸಲುವಾಗಿ ಆರಂಭಿಸಲಾಗಿರುವ ಪ್ರಜಾಸೇವೆ ಸಭೆಯನ್ನು ಈಗಾಗಲೇ ತಾಲೂಕಿನ ತೆರಕಣಾಂಬಿಯಲ್ಲಿ ನಡೆಸಲಾಗಿದೆ. ಸಾಕಷ್ಟು ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ ನಿವೇಶನಕ್ಕಾಗಿ ಕೋರಿದ ಅರ್ಜಿಗಳೇ ಹೆಚ್ಚು ಇವೆ. ಜನರಿಗೆ ಈ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಜಾಸೇವೆ ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಪರಿಹಾರ ನೀಡಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.

ಇದೇ ವೇಳೆ ಸಚಿವರು ಸಾಂಕೇತಿಕವಾಗಿ ಮೇವಿನ ಕಿಟ್ ಗಳನ್ನು ರೈತರಿಗೆ ವಿತರಿಸಿದರು.

ಸಭೆಯ ಉದ್ಘಾಟನೆ ಬಳಿಕ ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸಚಿವರು ಸ್ವೀಕರಿಸಿದರು. ಸರತಿ ಸಾಲಿನಲ್ಲಿ ನಿಂತು ಸಚಿವರ ಬಳಿ ಅರ್ಜಿಯೊಂದಿಗೆ ಕುಂದು ಕೊರತೆ ಹೇಳಿಕೊಂಡ ಜನತೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಹೆಚ್ಚಾಗಿದೆ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಕುಡಿಯುವ ನೀರಿನ ಬವಣೆ ನೀಗಿಸಬೇಕು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯಬೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುವAತೆ ಸೂಚಿಸಬೇಕು ಎಂದು ಮನವಿ ಮಾಡಿದರು.

ಹಲವೆಡೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಕೆಲ ಮಾರ್ಗಗಳಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಬಸ್ಸುಗಳ ನಿಯೋಜನೆ ಮಾಡುವಂತೆ ಹಲವರು ಕೋರಿದರು.

ಬೀದಿ ದೀಪ, ಚರಂಡಿಗಳ ಹೂಳು ತೆಗೆಯುವುದು ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಬೇಕು ಎಂದು ಜನತೆ ಸಚಿವರಲ್ಲಿ ಮನವಿ ಮಾಡಿದರು. ಖಾತೆ ಬದಲಾವಣೆ ಸೇರಿದಂತೆ ಹಲವು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಅರ್ಜಿಗಳು ಸಲ್ಲಿಕೆಯಾದವು.

ಜನರ ಸಮಸ್ಯೆಗಳನ್ನು ಕೇಳುತ್ತಿದ್ದಂತೆಯೇ ಸಚಿವರು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಅರ್ಜಿದಾರರ ಬಳಿಯೇ ಕರೆಸಿ ಶೀಘ್ರ ಪರಿಹರಿಸಿ ಮುಂದಿನ ಸಭೆಯ ವೇಳೆಗೆ ಯಾವುದೇ ದೂರು ಬಾರದಂತೆ ಕ್ರಮವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು. ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಎಲ್ಲಿಯೂ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ತನ್ಮಯ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *