ಹಳ್ಳಿ ಹಳ್ಳಿಗೂ ನೇಗಿಲಯೋಗಿ ಯೋಜನೆ ತಲುಪಿಸಲು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಸೂಚನೆ

ಚಾಮರಾಜನಗರ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿಗಳ ನೇಗಿಲಯೋಗಿ ಯೋಜನೆಗೆ ಚಾಮರಾಜನಗರ, ಗುಂಡ್ಲುಪೇಟೆ ಆಯ್ಕೆಯಾಗಿದ್ದು, ಮುಂಗಾರಿಗೂ ಮೊದಲೇ ರೈತರಿಗೆ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಕೃಷಿ ಸಚಿವರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನೇಗಿಲಯೋಗಿ ಯೋಜನೆಯನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು. ಫಸ್ಟ್ ಕಂ ಫಸ್ಟ್ ಸರ್ವ್( ಮೊದಲು ಬಂದವರಿಗೆ ಮೊದಲ ಆದ್ಯತೆ) ಆಧಾರದ ಮೇಲೆ ಸೇವೆ ಒದಗಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಆರ್.ಟಿ.ಒ ನೋಂದಣಿಯಾಗಿರುವ ಒಟ್ಟು 6,108 ಟ್ರ್ಯಾಕ್ಟರ್ ಗಳಿವೆ. ಸುಮಾರು 2,263 ಟ್ರ್ಯಾಕ್ಟರ್ ಮಾಲೀಕರು ಯೋಜನೆಯಡಿ ನೋಂದಣಿಯಾಗಲು ಒಪ್ಪಿಗೆ ನೀಡಿದ್ದಾರೆ. ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ 66,043 ಸಾವಿರ ರೈತರಿಗೆ ಯೋಜನೆಯಿಂದ ಲಾಭವಾಗಲಿದೆ. ಯೋಜನೆ ಕುರಿತು ರೈತರಿಗೆ ಪ್ರಚಾರ ಮಾಡಲು ಗ್ರೂಪ್ ಕಾಲ್ ಮಾಡುವ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ರೈತರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಉಪಗ್ರಹ ಆಧರಿತ ಬೆಳೆ ಮಾಹಿತಿ, ಭೂಮಿಯ ಸತ್ವ, ಹವಾಮಾನ ಮುನ್ಸೂಚನೆ ಇತ್ಯಾದಿ ವಿವರಗಳನ್ನು ರೈತರ ಮೊಬೈಲ್ ಗೆ ನೀಡುವ ರೈತ ಚೈತನ್ಯ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈಗಾಗಲೇ ಲಕ್ಷಾಂತರ ರೈತರಿಗೆ ಬೆಳೆ ಮಾಹಿತಿಯ ಸಂದೇಶ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ, ನಷ್ಟದಿಂದ ಪಾರು ಮಾಡಲು ನೆರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

2026-27ರ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ 17,925 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷದ 9,448 ರೈತರಿಗೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೋಂದಣಿಯಾಗಿದೆ. ಅನ್ಯ ಕಾರಣಗಳನ್ನು ನೀಡಿ ರೈತರನ್ನು ಪರಿಹಾರದಿಂದ ವಂಚಿಸುವ ವಿಮಾ ಕಂಪನಿಗಳನ್ನು ಕರೆಸಿ ಎಚ್ಚರಿಕೆ ನೀಡಬೇಕು. ಬರಗಾಲದಲ್ಲಿ ಯಾವುದೇ ಕಾರಣಕ್ಕೂ ಬೆಳೆ ವಿಮೆ ಪಾವತಿ ವಿಳಂಬ ಆಗಬಾರದು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದ ಸಚಿವರು, ಕೃಷಿ ಕಾಲೇಜಿನ ಮಾಹಿತಿ ಪಡೆದರು.

ಕೃಷಿ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆಯಿದೆ. ಮುಖ್ಯ ಕಟ್ಟಡ ಇಂದಿಗೂ ಪೂರ್ಣವಾಗಿಲ್ಲ. ಗ್ರಂಥಾಲಯ ಕಟ್ಟಡದಲ್ಲಿ ತರಗತಿಗಳನ್ನು ಮಾಡಲಾಗುತ್ತಿದೆ. ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ಹೌಸಿಂಗ್ ಬೋರ್ಡ್‍ನವರು ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದಾರೆ ಎಂದು ಅಧಿಕಾರಿಗಳು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಬೆಳಗಾವಿ ಅಧಿವೇಶನ ಮುಗಿದ ಬಳಿಕ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಸುಮಾರು 15 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವರು ಯೂರಿಯಾ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿಗಾ ವಹಿಸಬೇಕು. ಜೈ ಕಿಸಾನ್ ಆ್ಯಪ್ ನಲ್ಲಿ ಎಲ್ಲವೂ ಅಪ್ ಡೇಟ್ ಮಾಡಬೇಕು ಎಂದು ಸೂಚನೆ ನೀಡಿದರು.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸದೇ ಹಲವು ರೈತರು ಸಹಾಯಧನದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ರೈತರು ಸೌಲಭ್ಯದಿಂದ ವಂಚಿತರಾದರು, ಅವರನ್ನು ಮತ್ತೆ ಯೋಜನೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ತಾಲೂಕುವಾರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ವಂಚಿತರಾದವರ ವಿವರ ನೀಡಬೇಕು ಎಂದು ಸಚಿವರು ತಿಳಿಸಿದರು.

ಮಣ್ಣು ಸ್ಯಾಂಪಲ್ ಪಡೆದು 2 ತಿಂಗಳ ಬಳಿಕ ವರದಿ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಗೆ 15 ಲಕ್ಷ ರೂ. ಗಳನ್ನು ಮಣ್ಣು ಪರೀಕ್ಷೆಗೆ ಭರಿಸಲು ಅಭ್ಯಂತರವೇನಿಲ್ಲ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಹನಿ ನೀರಾವರಿ ಹಾಗೂ ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಲ್ಲಿ ಯೋಜನೆ ಹಾಗೂ ಸವಲತ್ತು ಓವರ್ ಲ್ಯಾಪ್ ಆಗದಂತೆ ನೋಡಿಕೊಳ್ಳಬೇಕು. ಜಲಾನಯನ ಪ್ರದೇಶದ ಚಟುವಟಿಕೆಗಳು ಹಾಗೂ ವಿಬಿಜಿ ರಾಮ್ ಜಿ ಯೋಜನೆಯನ್ನು ಸಮರ್ಪಕವಾಗಿ ಬಳಸಬೇಕು ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಬರದಲ್ಲಿ ಮೇವು ಪೂರೈಕೆ ಹಾಗೂ ರೋಗ ಹರಡದಂತೆ ನೋಡಿಕೊಳ್ಳಬೇಕು. ಪ್ರತಿ ಗ್ರಾಮದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಆದಾಯ ತಂದುಕೊಡುವ ತೇಗ ಸಿರಿ ಯೋಜನೆಗೆ ಹೆಚ್ಚು ಉತ್ತೇಜನ ನೀಡಬೇಕು. ರಸ್ತೆ ಬದಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ತೇಗದ ಸಸಿ ನೆಡಬೇಕು. ಈ ಯೋಜನೆಯಲ್ಲಿ ಶೇ.70 ರಷ್ಟು ಸರ್ಕಾರಕ್ಕೆ, ಶೇ.30 ರಷ್ಟು ರೈತರಿಗೆ ಆದಾಯ ಹಂಚಿಕೆಯಾಗಲಿದೆ ಎಂದು ಸಚಿವರಾದ ನರೇಂದ್ರ ಸ್ವಾಮಿ ಅವರು ತಿಳಿಸಿದರು.

ಈ ಬಗ್ಗೆ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಚಿವರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಕೃಷಿ ಸಚಿವರು ನೇಗಿಲಯೋಗಿ ಯೋಜನೆ ಹಾಗೂ ಆನ್ ಲೈನ್ ಮೂಲಕನ ರಸಗೊಬ್ಬರ ಬುಕ್ಕಿಂಗ್ ಕುರಿತು ಪ್ರಚಾರದ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಆಕೃತಿ ಬನ್ಸಾಲ್, ಅಪರ ಕೃಷಿ ನಿರ್ದೇಶಕರಾದ ಮಧುಸೂದನ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ನರೇಶ್, ಕೃಷಿ ಕಾಲೇಜಿನ ಡೀನ್ ದೊರೆಸ್ವಾಮಿ, ಜಂಟಿ ಕೃಷಿ ನಿರ್ದೇಶಕರಾದ ಭಾನುಪ್ರಕಾಶ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನಾ ಸಭೆಗೂ ಮೊದಲು ಸಚಿವರು ರೈತ ಮುಖಂಡರೊಂದಿಗೆ ಚರ್ಚಿಸಿದರು.

Leave a Reply

Your email address will not be published. Required fields are marked *