- ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ
ಚಾಮರಾಜನಗರ: ಪ್ರವಾಸಿ ಮಾರ್ಗದರ್ಶಿಗಳ ಮಾಸಿಕ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಎಸ್.ಜೆ.ಅಶೋಕ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಮಾಯಾ ಗಾರ್ಡನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ ಹಾಗೂ ಗಡಿನಾಡು ಪ್ರವಾಸಿ ಮಾರ್ಗದರ್ಶಿಗಳ ಸಂಘದ ವತಿಯಿಂದ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಸರ್ಕಾರವು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ 5 ಸಾವಿರ ಪ್ರೋತ್ಸಾಹಧನವು ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿಲ್ಲ. ಜೀವನದ ನಿರ್ವಹಣೆಗೆ ಅನುಗುಣವಾಗಿ ಹೆಚ್ಚಿಸಬೇಕು, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಮಾರ್ಗದರ್ಶಿಗಳಿಗೆ ಆರೋಗ್ಯವಿಮೆ, ವಸತಿ ಸೌಲಭ್ಯ ಹಾಗೂ ಪ್ರವಾಸ ಸಂದರ್ಭದಲ್ಲಿ ಊಟ, ವಸತಿ ಭತ್ಯೆ, ಬಸ್ ಪಾಸ್ ನೀಡಬೇಕು. ಸಮವಸ್ತ್ರ, ವಿತರಿಸಬೇಕು ಎಂದರು.
ಗಡಿನಾಡು ಪ್ರವಾಸಿ ಮಾರ್ಗದರ್ಶಿಗಳಸಂಘದ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷ ಮೊಹಿದ್ದೀಖಾನ್ ಮಾತನಾಡಿದರು.
ಸಭೆಯಲ್ಲಿ ಬಿಜಾಪುರ ಗೈಡ್ ರಾಜಶೇಖರ್, ಚಾಮರಾಜನಗರ ಉಸ್ತುವಾರಿ ಹೆಚ್.ಆರ್.ದೇವರಾಜು, ಗಡಿನಾಡು ಪ್ರವಾಸಿ ಮಾರ್ಗದರ್ಶಿಗಳ ಸಂಘದ ಉಪಾಧ್ಯಕ್ಷ ಎಂ.ಚಿದಾನಂದಮೂರ್ತಿ, ಕಾರ್ಯದರ್ಶಿ ಎಸ್.ರಾಜು, ಖಜಾಂಚಿ ಹೆಚ್.ಎಂ.ದೇವರಾಜು, ಸಂಚಾಲಕ ಎಸ್.ವೆಂಕಟಯ್ಯ, ನಿರ್ದೇಶಕ ಟಿ.ಮಹದೇವಯ್ಯ ಭಾಗವಹಿಸಿದ್ದರು.
