ಆಟೋ ಚಾಲಕರು ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ: ಎಂ.ರಾಮಚಂದ್ರ

ಚಾಮರಾಜನಗರ: ಆಟೋ ಚಾಲಕರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ  ಎಂ.ರಾಮಚಂದ್ರ ಹೇಳಿದರು.
ನಗರದ ರಾಮಸಮುದ್ರದ ಬಸ್ ನಿಲ್ದಾಣದಲ್ಲಿರುವ ಶ್ರೀಚಾಮುಂಡೇಶ್ವರಿ ಆಟೋ ಚಾಲಕರು ಮತ್ತು‌ ಮಾಲೀಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಾವಿರಾರು ಜನರಿಗೆ ನಿತ್ಯದ ಪ್ರಯಾಣದಲ್ಲಿ ಕನ್ನಡದ ಪ್ರಾಥಮಿಕ ಪದಗಳನ್ನು ಕಲಿಸುವ ಮೊದಲ ಗುರುಗಳೇ ಆಟೋ ಚಾಲಕರು. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುವ ಮೂಲಕ ನಗರದ ಮೂಲೆ ಮೂಲೆಯಲ್ಲೂ ಕನ್ನಡದ ವಾತಾವರಣವನ್ನು ಜೀವಂತವಾಗಿಡುತ್ತಾರೆ. ಆಟೋಗಳ ಹಿಂದೆ ಬರೆದಿರುವ ಕವಿಗಳ ಸಾಲುಗಳು, ಗಾದೆ ಮಾತುಗಳು ಮತ್ತು ಕನ್ನಡದ ಅಭಿಮಾನದ ಘೋಷಣೆಗಳು ಜನಸಾಮಾನ್ಯರಲ್ಲಿ ಭಾಷಾ ಪ್ರೇಮವನ್ನು ಹೆಚ್ಚಿಸುತ್ತವೆ ಎಂದರು.
ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಯಾವುದೇ ಅನ್ಯಾಯವಾದಾಗಲೂ ಬೀದಿಗಿಳಿದು ಹೋರಾಡುವ ಮೊದಲ ವರ್ಗದಲ್ಲಿ ಆಟೋ ಚಾಲಕರು ಸದಾ ಇರುತ್ತಾರೆ ಎಂದರು.
ದಿನನಿತ್ಯ ತುಂಬಾ ಶ್ರಮಪಡುವ ಆಟೋ ಚಾಲಕರು ತಮ್ಮ ದುಡಿಮೆಯ ಹಣವನ್ನು  ಮಕ್ಕಳ ಜೀವನಕ್ಕೆ ಉಳಿತಾಯ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾ ಮಾಜಿ ಅಧ್ಯಕ್ಷ ಎಂ.ಸುರೇಶ್ ಮಾತನಾಡಿ, ವಾಹನ ಚಲನಾ ಪರವಾನಗಿ ಮಾಡಿಸಿಕೊಂಡು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಆಟೋ ಚಾಲನೆ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು
ಎಂದರು.
ಡಾ. ರಾಜ್‌ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್  ಅವರಂತಹ ಮೇರು ನಟರ ಆದರ್ಶಗಳನ್ನು ಮತ್ತು ಕನ್ನಡದ ಹಾಡುಗಳನ್ನು ತಮ್ಮ ವೃತ್ತಿಜೀವನದ ಭಾಗವಾಗಿಸಿಕೊಂಡು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.ನಿತ್ಯದ ಬದುಕಿನ ಜಂಜಾಟದ ನಡುವೆಯೂ ಅವರು ತೋರುವ ಈ ಭಾಷಾ ಅಭಿಮಾನ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಯುವ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಗೌರವಾಧ್ಯಕ್ಷ ಮಹೇಶ್, ಜಿಲ್ಲಾ ಉಪಾಧ್ಯಕ್ಷ ಸುಂದರ್, ಯಳಂದೂರು ತಾಲ್ಲೂಕು ಅಧ್ಯಕ್ಷ ಕುಮಾರ್ ಬೂದಂಬಳ್ಳಿಮೋಳೆ, ಶ್ರೀ  ಚಾಮುಂಡೇಶ್ವರಿ ಆಟೋ ಚಾಲಕರು ಮತ್ತು‌ ಮಾಲೀಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *