- ಚಾಮರಾಜನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ
ಚಾಮರಾಜನಗರ : ಬಿಜೆಪಿ ಎಸ್‌ಟಿ ಮೋರ್ಚಾವು ಸಂವಿಧಾನ ಬದ್ಧ ಶೇ.7 ರಷ್ಟು ಎಸ್‌ಟಿ ಮೀಸಲಾತಿ ಜಾರಿಗೆ ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಮೈಸೂರಿನಲ್ಲಿ ಜು. 7 ರಂದು ಹಮ್ಮಿಕೊಂಡಿದೆ ಎಂದು ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಮೇಯರ್ ಶಿವಕುಮಾರ್ ಹೇಳಿದರು.
ನಗರದ ರಾಮಸಮುದ್ರ ಕುಲುಮೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಬದ್ಧ ಶೇ.7 ಎಸ್‌ಟಿ ಮೀಸಲಾತಿ ಜಾರಿಗೆ ಒತ್ತಾಯಿಸಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಹಿಂದಿನ ಬಿಜೆಪಿ ಸರ್ಕಾರ ಎಸ್‌ಟಿಗೆ ಶೇ. 3ರಿಂದ ಶೇ. 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿದೆ. ಅದರಂತೆ 3 ಸಾವಿರದಿಂದ 4 ಸಾವಿರದಷ್ಟು ಹುದ್ದೆಗಳು ಸಿಗಬೇಕಾಗಿದೆ. ಜನಾಂಗದ ಅನೇಕರಿಗೆ ಕೆಎಎಸ್, ಐಪಿಎಸ್ ಸೇರಿದಂತೆ ಉನ್ನತವಾದ ದೊಡ್ಡದೊಡ್ಡ ಹುದ್ದೆಗಳು ಕೂಡ ಸಿಗಬೇಕಿದೆ. ಶೇ. 3 ರಷ್ಟು ಮೀಸಲಾತಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಸಮುದಾಯಕ್ಕೆ ಅನ್ಯಾಯ ಆಗುತ್ತದೆ, ಅದೇ ರೀತಿ ಸಮುದಾಯ ಮಕ್ಕಳ ಶಿಕ್ಷಣದಲ್ಲೂ ಪದವಿ, ಇಂಜಿನಿಯರ್, ಮೆಡಿಕಲ್ ಶೀಟ್‌ಗಳಲ್ಲೂ ಅನ್ಯಾಯ ಆಗಲಿದೆ. ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎಂದರೆ. ಶಿಕ್ಷಣ ಮುಖ್ಯವಾಗಿದೆ ಎಂದರು.
ಸಂವಿಧಾನ ಬದ್ಧ ಶೇ.7 ಎಸ್‌ಟಿ ಮೀಸಲಾತಿ ಜಾರಿಗೆ ಒತ್ತಾಯಿಸಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಪ್ರತಿ ಜಿಲ್ಲೆಯಲ್ಲೂ ಮಾಡಲಾಗುತ್ತಿದ್ದು, ಈಗಾಗಲೇ ದಾವಣಗೆರೆ ಇತರೆ ಜಿಲ್ಲೆಗಳಲ್ಲಿ ಸಮಾವೇಶಗಳು ಯಶಸ್ವಿಯಾಗಿದ್ದು, ಜು. 7 ರಂದು ಮೈಸೂರಿನಲ್ಲಿ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.
ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಬಿಜೆಪಿ ಎಸ್‌ಟಿ ಮೋರ್ಚಾವು ಸಂವಿಧಾನ ಬದ್ಧ ಶೇ.7 ಎಸ್‌ಪಿ ಮೀಸಲಾತಿ ಜಾರಿಗೆ ಒತ್ತಾಯಿಸಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ರಾಜ್ಯಾದ್ಯಂತ ಮಾಡುತ್ತಿದೆ. ರಾಜ್ಯದಲ್ಲಿ ಸಮುದಾಯಕ್ಕೆ ಏನಾದರು ಅನ್ಯಾಯವಾದಾಗ ಮೊದಲು ಹೋರಾಟ ಮಾಡುತ್ತಿದ್ದು, ಮೈಸೂರು, ಚಾಮರಾಜನಗರ ಜಿಲ್ಲೆಯವರು. ಎಸ್‌ಟಿ ಗಾಗಿ ಹೋರಾಟ ಮಾಡಿದ್ದು ಈ ಭಾಗದಲ್ಲಿ 3 ಜನರು ಶಾಸಕರು ಆಗುತ್ತಿದ್ದೇವೆ. ಈಗ ಎಸ್‌ಟಿಗೆ ಒಂದೇ ಒಂದು ಶಾಸಕ ಸ್ಥಾನ ಸಿಕ್ಕಿದೆ.
ಹಿಂದೆ ಸಾಮಾನ್ಯ ಕ್ಷೇತ್ರದಿಂದ ಚಿಕ್ಕಮಾದನಾಯಕ, ಚಿಕ್ಕಮಾದು, ಚಿಕ್ಕಣ್ಣ, ಜಿ.ಟಿ.ಜಯಕುಮಾರ್ ಆಗಿದ್ದರು. ಆಗಾಗಿ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಟಿಗೆ ಈ ವಿಭಾಗದಲ್ಲಿ ಹೆಚ್ಚಿನ ಶಾಸಕ ಸ್ಥಾನಮಾನ ನೀಡಬೇಕಿದೆ. ಮೈಸೂರಿನಲ್ಲಿ ನಡೆಯುವ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಾಗುವುದು ಎಂದರು.
ಎಸ್‌ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಸುಂದರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಎಸ್‌ಟಿಗೆ ಜಾರಿ ಮಾಡಿರುವ ಶೇ. 7 ಮೀಸಲಾತಿಗೆ.. ಯಾರು ಒಬ್ಬ ನ್ಯಾಯಾಲಯದಲ್ಲಿ ತಡೆಯಾಜ್ಞೆ ಮಾಡಿದ್ದಾರೆ ಎಂದು ಅದನ್ನು ತೆರವುಗೊಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿದರು. ಮೈಸೂರಿನಲ್ಲಿ ಜು. 7 ರಂದು ನಡೆಯುವ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ. ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ಮುಖಂಡ ಅಪ್ಪಣ, ಬಿಜೆಪಿ ಮಾಜಿ ಅಧ್ಯಕ್ಷ ಆರ್.ಸುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡಾ ಕೂಡುಪ್ರಕಾಶ್, ಕೋಶಾಧ್ಯಕ್ಷ ರಘು, ಜಿಲ್ಲಾ ಉಪಾಧ್ಯಕ್ಷ ಹರದನಹಳ್ಳಿ ಚಂದ್ರು, ಜಿಲ್ಲಾ ಉಪಾಧ್ಯಕ್ಷ ತಿವುವಿರಾಟ್, ನಾಗೇಶ್ ಮಾಸ್ಟರ್, ಕೃಷ್ಣ, ಸೀಗಮಾರನಾಯಕ, ಚಂದ್ರೇಶ್, ರಾಮನಾಯಕ, ಯಳಂದೂರು ಸುನಿಲ್, ಚಿಕ್ಕಾಟಿ ಶಿವಣ್ಣ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್ಮ, ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಗಡೆ ಗುರುಪ್ರಸಾದ್, ಹುತ್ತೂರು ನಾಗರಾಜು ಇತರರು ಭಾಗವಹಿಸಿದ್ದರು.