ಯಳಂದೂರು ಪಟ್ಟಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಜಾಗೃತಿ ಜಾಥಾ

ಚಾಮರಾಜನಗರ,: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ (ಎಸ್.ಐ.ಆರ್) ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಯಳಂದೂರು ಪಟ್ಟಣದಲ್ಲಿಂದು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

     ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ನಿರ್ದೇಶನದನ್ವಯ ಯಳಂದೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್ ನೇತೃತ್ವದಲ್ಲಿ ಎಸ್.ಐ.ಆರ್ ಬಗ್ಗೆ ಜನಜಾಗೃತಿ ಜಾಥಾ ಆಯೋಜಿಸಲಾಗಿತ್ತು. 

     ಯಳಂದೂರು ತಾಲೂಕು ಪಂಚಾಯತ್ ಮುಂಭಾಗದ ಆವರಣದಿಂದ ಆರಂಭವಾದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಜಾಥಾಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಸುಬ್ರಮಣ್ಯ ಅವರು ಚಾಲನೆ ನೀಡಿದರು. 

  ಜಾಥಾದಲ್ಲಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಎನ್.ಆರ್.ಎಲ್.ಎಂ. ಸದಸ್ಯರು ಮತದಾರರ ಪಟ್ಟಿ ವಿಶೇಷ ಸಮಗ್ರ (ಎಸ್.ಐ.ಆರ್) ಪರಿಷ್ಕರಣೆ-2026ರ ಮಹತ್ವದ ಬಗ್ಗೆ ಪ್ಲೇ-ಕಾರ್ಡ್‍ಗಳನ್ನು ಪ್ರದರ್ಶಿಸಿ, ಜಾಗೃತಿ ಘೋಷಣೆಗಳನ್ನು ಮೊಳಗಿಸಿದರು.

  ತಾಲೂಕು ಪಂಚಾಯತ್ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪಿತು. ಅಲ್ಲಿಯೂ ಸಹ ಮತದಾರರ ಪಟ್ಟಿಗೆ ಸೇರ್ಪಡೆ ಸಂಬಂಧ ನಾಗರಿಕರಿಗೆ ಅರಿವು ಮೂಡಿಸಿ ಧ್ವನಿವರ್ಧಕದ ಮೂಲಕ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲಾಯಿತು.

  ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಪ್ರಕ್ರಿಯೆ ಕುರಿತು ವೇಳಾಪಟ್ಟಿಯ ಅಂಶಗಳ ಬಗ್ಗೆ ಅರಿವು ಮೂಡಿಸುವ ಭಿತ್ತಿ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶಿಸಲಾಯಿತು. ಅಲ್ಲದೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್‍ಗಳಲ್ಲಿದ್ದ ಸಾರ್ವಜನಿಕರಿಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಬಗ್ಗೆ ಜಾಗೃತಿ ಮೂಡಿಸಲಾಯಿತು. 

   ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ರವೀಂದ್ರ, ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. 

Leave a Reply

Your email address will not be published. Required fields are marked *