ಚಾಮರಾಜನಗರ: ವಿದ್ಯೆ ಬುದ್ಧಿಗೆ ತಕ್ಕಂತೆ ಉದ್ಯೋಗ ಸಿಗಬೇಕಾದರೆ ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಹೇಳಿದರು.
ಡಿಎಂ ಚಾರಿಟಬಲ್ ಟ್ರಸ್ಟ್ ಗುರುವಾರ ಸಂತೇಮರಹಳ್ಳಿಯಲ್ಲಿ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಹತೆ, ಬುದ್ಧಿ ಇದ್ದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ಕೌಶಲ್ಯ ಇರಬೇಕು. ಆಗ ನಮ್ಮ ಸೇವೆ ಮತ್ತು ಉತ್ಪನ್ನಗಳಲ್ಲಿ ಮೌಲ್ಯ ಹೆಚ್ಚಾಗಿ ಅದರ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ಇಂದಿನ ಯುವಕ ಯುವತಿಯರು ವಿದ್ಯಾರ್ಹತೆಗೆ ತಕ್ಕಂತೆ ವಿವಿಧ ಕೌಶಲ್ಯಗಳ ತರಬೇತಿ ಹೊಂದಬೇಕು. ಆಗ ಉದ್ಯೋಗ ಸುಲಭವಾಗಿ ಸಿಗುತ್ತದೆ. ಇಲ್ಲವಾದರೆ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಕೂರಬೇಕಾಗುತ್ತದೆ. ಅದು ಎಲ್ಲರಿಗೂ ಸಿಗುವುದಿಲ್ಲ ಎಂದು ಅವರು ನುಡಿದರು.
ಒಂದು ಬಟ್ಟೆ ಹೊಲಿಯುವುದಕ್ಕೂ ಅವಕಾಶವಿಲ್ಲದೆ ಪರದಾಡುತ್ತಿದ್ದ ಟೈಲರ್ ಒಬ್ಬ ಕೌಶಲ್ಯ ತರಬೇತಿ ಪಡೆದ ನಂತರ ತನ್ನ ವೃತ್ತಿಪರತೆ ಹೆಚ್ಚಿಸಿಕೊಂಡು ಇಂದು ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ಪ್ರಸಂಗ ಒಂದನ್ನು ಮುತ್ತುರಾಜ್ ಅವರು ಉದಾಹರಣೆ ಸಹಿತ ತೆರೆದಿಟ್ಟರು.
ಇಂತಹ ಅನೇಕ ವೃತ್ತಿಪರರನ್ನು ಬಿತ್ತಿ ಬೆಳೆಸುತ್ತಿರುವ ಸಂತೇಮರಹಳ್ಳಿಯ ಡಿ.ಎಂ. ಚಾರಿಟೇಬಲ್ ಟ್ರಸ್ಟ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ತೋಟಗಾರಿಕೆ ಇಲಾಖೆ, ಜಂಟಿ ನಿರ್ದೇಶಕ ಬಿ. ಆರ್. ಗಿರೀಶ್ ಮಾತನಾಡಿ, ತೋಟಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು ಕೌಶಲ್ಯ ತರಬೇತಿಗಳನ್ನು ಪಡೆದರೆ ಬದಲಾದ ಪೈಪೋಟಿಗೆ ತಕ್ಕಂತೆ ಉದ್ಯೋಗ ಅವಕಾಶಗಳು ಲಭಿಸುತ್ತವೆ. ಹಾಗೆಯೇ ಸ್ವಯಂ ಉದ್ಯೋಗಕ್ಕೂ ಸಾಕಷ್ಟು ಅವಕಾಶಗಳಿವೆ. ಇದನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮೊಬೈಲ್ ದುರ್ಬಳಕೆ ಯಿಂದಾಗುವ ಸಮಸ್ಯೆಗಳನ್ನು ವಿವರಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಅಧಿಕಾರಿ ಚಂದ್ರ ಪಾಟೀಲ್ ಅವರು ರೀಲ್ಸ್ ನೋಡುವ ಚಟ ಯುವ ಜನತೆಯಲ್ಲಿ ಹೆಚ್ಚಾಗಿದ್ದು, ಇದರಿಂದ ಮೊಬೈಲಿಂದಾಗಿರುವ ದುಷ್ಪರಿಣಾಮ ವಿಪರೀತವಾಗಿದೆ ಎಂದರು. ಮೊಬೈಲ್ ಸದ್ಬಳಕೆ ಕುರಿತು ಅನೇಕ ಸಲಹೆಗಳನ್ನು ಅವರು ನೀಡಿದರು.
ವಲಯ ಅರಣ್ಯಾಧಿಕಾರಿ ಮಂಜುನಾಥ್ ಓಣಿಕೇರಿ ಮಾತನಾಡಿ, ಉತ್ತಮ ಕೌಶಲ್ಯ ರೂಡಿಸಿಕೊಂಡರೆ ಅರಣ್ಯ ಮತ್ತು ಕೃಷಿ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ಭಾಗದ ಜನತೆ ಡಿಎಂ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಇದುವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವ ಸಲಹೆಗಾರರಾದ ಜೈ ಶಂಕರ್, ರಾಜು ಎಂ, ಕೌಶಲ್ಯ ಕೇಂದ್ರದ ಪರಮೇಶ್, ಮಧುಶ್ರೀ, ಸುಮತಿ ಹಾಗೂ ಕುಮಾರಿ ಹಾಜರಿದ್ದರು.