- ಲಯನ್ಸ್ ಸಂಸ್ಥೆಯು ವಿಶ್ವದ ಅತಿ ದೊಡ್ಡ ಸೇವಾ ಸಂಸ್ಥೆ: ಕೃಷ್ಣಗೌಡ
- ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಚಾಮರಾಜನಗರ : ಲಯನ್ಸ್ ಸಂಸ್ಥೆಯು ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿದೆ ಎಂದು ಲಯನ್ಸ್ ಸಂಸ್ಥೆಯ ಮಾಜಿ ಜಿಲ್ಲಾ ರಾಜ್ಯಪಾಲ ಕೃಷ್ಣಗೌಡ ಹೇಳಿದರು.
ನಗರದ ಹೋಟೆಲ್ ನಂದಿ ಇನ್ ಸಭಾಂಗಣದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ನಡೆದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಹಾಗೂ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧನ ಕಾರ್ಯಕ್ರಮದಲ್ಲಿ ನೂತನ ಪದಾಧಿ ಕಾರಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದರು. 1917ರಲ್ಲಿ ಆರಂಭವಾದ ಲಯನ್ಸ್ ಸಂಸ್ಥೆಯು ಸಮಾಜಸೇವೆ, ಆರೋಗ್ಯ ಶಿಬಿರ, ನೇತ್ರದಾನದಂತಹ ಜನ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.
ದಿನನಿತ್ಯ ಹಲವಾರು ಸಂಘ-ಸಂಸ್ಥೆ ಹುಟ್ಟುತ್ತವೆ. ಹಾಗೆಯೇ ಮುಚ್ಚಿ ಹೋಗುತ್ತಿವೆ ಆದರೆ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು 109 ವರ್ಷಗಳಿಂದ ನಿರಂತರವಾಗಿ ಪ್ರಪಂಚದಲ್ಲೇ. ಸೇವೆ ಮಾಡುತ್ತಿದೆ.
ಚಾಮರಾಜನಗರದಲ್ಲಿ 45 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಲಯನ್ಸ್ ಬಂಧುಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸುವೆ ಎಂದರು.
2ನೇ ಉಪ ಜಿಲ್ಲಾ ರಾಜ್ಯಪಾಲ ಎಂ.ಸಿದ್ದೇಗೌಡ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಅತ್ಯಂತ ಯಶ್ವಸಿಯಾಗಿ ಚಾಮರಾಜನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಯನ್ಸ್ ಸೇವಾ ಸಂಸ್ಥೆಯ ಪ್ರಪಂಚದಲ್ಲಿ ಸೇವಾ ಸಂಸ್ಥೆಗಳಲ್ಲಿ ಮೊದಲನೆಯದಾಗಿದೆ. ಪ್ರಪಂಚದಲ್ಲಿ 12 ಮಿಲಿಯನ್ ಸದಸ್ಯರನ್ನು ಹೊಂದಿದೆ. 214 ದೇಶಗಳಲ್ಲಿ ಲಯನ್ಸ್ ಸಂಸ್ಥೆ ಪಸರಿಸಿದೆ ಎಂದರು.
ಸೈಬರ್ ಕ್ರೈಂ ವಿಭಾಗ ಉಪಪೊಲೀಸ್ ಅಧೀಕ್ಷಕ ಎಂ.ಎಸ್.ಪವನ್‌ಕುಮಾರ್ ಮಾತನಾಡಿ, ಪ್ರತಿ ಕ್ಷಣವೂ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿದ್ದು, ಆದರಿಂದ ಮೋಸ ಹೋಗಿರುವವರೇ ಹೆಚ್ಚಾಗಿದ್ದು, ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಆಗಾಗಿ ಮೊಬೈಲ್ ಪೋನ್ ಬಳಸುವಾಗ ಎಚ್ಚರಿಕೆ ಬಳಸಬೇಕು ಯಾವುದೇ ಓಟಿಪಿ ಶೇರ್ ಮಾಡಬೇಡಿ, ಆಮಿಷಗಳಿಗೆ ಹೋಗಬೇಡಿ. ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇವೆ. ನಿಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಆಫರ್ ಕೊಡುತ್ತಾರೆ ಇದರಿಂದ ಹುಷಾರಾಗಿ ಇರಬೇಕು ಎಂದು ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಿದರು.
ಲಯನ್ಸ್ ಸೇವಾ ಭವನ ನಿರ್ಮಿಸಲು ಶ್ರಮಿಸುವೆ : ನೂತನ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಿ.ಎಂ.ಪ್ರಭುಸ್ವಾಮಿ ಮಾತನಾಡಿ, ನಿಕಟಪೂರ್ವ ಅಧ್ಯಕ್ಷರ ಸಲಹೆ, ಲಯನ್ಸ್ ಬಂಧುಗಳ ಸಹಕಾರದಿಂದ ಚಾಮರಾಜನಗರದಲ್ಲಿ ಸೇವೆ ಅನ್ನುವ ಹೆಜ್ಜೆ ಗುರುತನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಬಸವಣ್ಣನವರ ಕಾಯಕ, ದಾಸೋಹ, ಸೇವೆ ತತ್ವದಡಿಯಲ್ಲಿ ಲಯನ್ಸ್ ಸಂಸ್ಥೆಯ ಸ್ನೇಹ, ಸೇವೆ, ಸತ್ಸಂಗ, ಇವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರ ವಿಶ್ವಾಸದೊಂದಿಗೆ ಸಮಾಜಕ್ಕೆ ನನ್ನಿಂದ ಸಾಧ್ಯವಾಗುವ ಸೇವೆ ಮಾಡಲು ಪ್ರಯತ್ನ ಮಾಡುತ್ತೇನೆ. ಅತಿ ಶೀಘ್ರದಲ್ಲೇ ಸೇವಾಭವನ ಕಟ್ಟುಲು ಪ್ರಯತ್ನ ಮಾಡುವೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಬಸವರಾಜೇಂದ್ರ ಮಾತನಾಡಿ, ಲಯನ್ಸ್ ಸಂಸ್ಥೆ ವತಿಯಿಂದ ಚಾಮರಾಜನಗಕ್ಕೆ ಒಳ್ಳೆಯ ಸೇವೆ ನೀಡಲು ಪಣತೊಟ್ಟಿದ್ದೇವೆ. ಅದಕ್ಕಾಗಿ ನಾವು ಬದ್ಧರಾಗಿದ್ದೇವೆ. ನೂತನ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಸದಸ್ಯರು ಸೇರ್ಪಡೆ : ಅಮಚವಾಡಿ ವೀರಭದ್ರನಾಯಕ, ಅಮಚವಾಡಿ: ರಾಜು. ಮಹೇಶ್ ಮತ್ತು ಈಶ ಲಯನ್ಸ್ ನೂತನ ಸದಸ್ಯರಾಗಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಪ್ರಾಂತೀಯ ಆರ್.ರಮೇಶ್ ಕುಮಾರ್, ವಲಯ ಅಧ್ಯಕ್ಷ ಕೆ.ಸುರೇಶ್ ಕುಮಾರ್, ಕಾರ್ಯದರ್ಶಿ ಟಿ.ಎಂ.ರಂಗಸ್ವಾಮಿ, ಖಜಾಂಚಿ ಕನ್ನಯ್ಯಲಾಲ್ ಜೈನ್ ಪದಾಧಿಕಾರಿಗಳು ಹಾಜರಿದ್ದರು.
