ಚಾಮರಾಜನಗರ : ಭಾರತ ದೇಶ, ಸಂಸ್ಕೃತಿ, ಪರಂಪರೆ, ಧರ್ಮ, ತತ್ವಗಳು ಸಂಕಷ್ಟದಲ್ಲಿ ದ್ದಾಗ ಅವತರಿಸಿದ ಶ್ರೀ ಶಂಕರಾಚಾರ್ಯರು ಭಾರತೀಯ ಸನಾತನ ಹಿಂದೂ ಧರ್ಮವನ್ನು ಕಾಪಾಡಿ, ಸಮನ್ವಯ ಗೊಳಿಸಿ, ಸರಳಗೊಳಿಸಿ, ಅರ್ಥೈಸಿ, ಪ್ರತಿಯೊಬ್ಬರೂ ಅನುಸರಿಸುವಂತೆ ರಕ್ಷಿಸಿದ ರಾಷ್ಟ್ರೀಯ ಏಕತೆಯ ಹರಿಕಾರರು ಎಂದು ಕರ್ನಾಟಕ ಶ್ರೀ ಶಂಕರ ಅಭಿಯಾನದ ಪ್ರಧಾನರಾದ, ವಿಪ್ರಶ್ರೀ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಶ್ರೀಶಂಕರ ಅಭಿಯಾನ ಕರ್ನಾಟಕ, ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯುತ್ ಕ್ಲಬ್, ಶಾರದಾ ಶಂಕರ ಭಕ್ತ ಮಂಡಳಿ, ನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶೃಂಗೇರಿ ಶಾರದಾ ಪೀಠದ 37ನೇ ಜಗದ್ಗುರುಗಳಾದ ಶ್ರೀ ಶ್ರೀ ವಿಧು ಶೇಖರ ಭಾರತೀಯರ ವರ್ಧಂತಿ ಮಹೋತ್ಸವ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಆದಿಶಂಕರರು ವಿಶ್ವದ ಜ್ಞಾನದ ಕಣಜ. ಜ್ಞಾನಮಾರ್ಗದ ಮೂಲಕ ಇಡೀ ವಿಶ್ವಕ್ಕೆ ಮಹತ್ವವಾದ ಅದ್ವೈತ ತತ್ವ ವನ್ನು ನೀಡಿ ಭಾರತದ ಶಕ್ತಿಯನ್ನು ಇಮ್ಮಡಿಗೊಳಿಸಿದ ರು. ಪುರಾಣಗಳು,ಭಗವದ್ಗೀತೆ, ವೇದಗಳು ಉಪನಿಷತ್ತುಗಳಿಗೆ ಅರ್ಥವನ್ನು ನೀಡಿ ಮಾನವ ಜನಾಂಗಕ್ಕೆ ಶುದ್ಧವಾದ ತತ್ವವನ್ನು ನೀಡಿ ಏಕತೆಯ ಭಾವದಿಂದ, ಸಮನ್ವಯತೆಯಿಂದ ಸಮೃದ್ಧವಾದ ಜೀವನವನ್ನು ನಡೆಸಲು ಮಾನವನಿಗೆ ಮಾರ್ಗದರ್ಶನವನ್ನು ನೀಡಿದ ಮಹಾ ಸಾಧಕರು.
ಕೇರಳದ ಪೂರ್ಣಾನದಿ ದಡದಲ್ಲಿರುವ ಕಾಲಡಿಯಲ್ಲಿ ಸಾಮಾನ್ಯ ಶಕ 788 ರಲ್ಲಿ ಜನಿಸಿ ತಮ್ಮ 32 ವರ್ಷಗಳ ಅಲ್ಪಾವಧಿಯ ಜೀವನ ಕಾಲದಲ್ಲಿ ಭಾರತದ ಪುಣ್ಯ ಭೂಮಿಯನ್ನು ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿ ತಮ್ಮ ವೇದಾಂತ ಪ್ರವಚನವನ್ನು, ಭಕ್ತಿ ಪ್ರಧಾನವಾದ ಗೀತೆಗಳು ಪ್ರವಚನಗಳನ್ನು ನೀಡಿ ಇಡೀ ದೇಶ ತಮ್ಮ ಶಿಷ್ಯರಾಗುವಂತೆ ಮಾಡಿದರು. ದಿಗ್ವಿಜಯ ಯಾ ತ್ರೆಯ ಮೂಲಕ ಪೂರ್ವದ ಜಗನ್ನಾಥದಿಂದ ಹಿಡಿದು ಪಶ್ಚಿಮದ ದ್ವಾರಕದವರೆಗೆ, ದಕ್ಷಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೂ ಸಂಚಾರ ಮಾಡಿ ವಿವಿಧ ದೇವಸ್ಥಾನಗಳನ್ನು ಪುನರ್ ನಿರ್ಮಿಸಿ,ವಿವಿಧ ಮತಧರ್ಮಗಳ ಪಂಡಿತರನ್ನು ವಾದದಲ್ಲಿ ಜಯಿಸಿ, ಕಾಶ್ಮೀರದ ಸರ್ವಜ್ಞ ಪೀಠವನ್ನು ಏರಿದರು. ಕಾಶ್ಮೀರದ ಸರ್ವಜ್ಞ ಪೀಠವು ಜ್ಞಾನದ ಸಂಕೇತ.ಪುಣ್ಯಭೂಮಿ. ಭಾರತದ ಆಧ್ಯಾತ್ಮದ ತುದಿಯನ್ನು ಮುಟ್ಟಿದ ಶಂಕರರು ತಮ್ಮ ಕೊನೆಯ ದಿನಗಳನ್ನು ಉತ್ತರದ ಕೇದಾರದಲ್ಲಿ ಕಳೆದು ಬ್ರಹ್ಮ ನಿರ್ವಾಣವನ್ನು ಪಡೆದರು.
ಮಾನವನ ಜೀವನವು ಜ್ಞಾನ,ಭಕ್ತಿ,ವೈರಾಗ್ಯ ಮುಂತಾದ ಸಾರ್ಥಕ ಗುಣಗಳಿಂದ ಜೀವನ ರೂಪಿತವಾಗಬೇಕು. ಅದಕ್ಕಾಗಿ ಅದ್ವೈತ ಮಾರ್ಗವನ್ನು ಅನುಸರಿಸಬೇಕು. ಈ ಜಗತ್ತಿನಲ್ಲಿ ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ. ಪ್ರಪಂಚದಲ್ಲಿ ಬದಲಾವಣೆಗಳು ಆಗುತ್ತದೆ ಈ ಬದಲಾವಣೆಗಳು ಮುಖ್ಯವಲ್ಲ. ಸತ್ಯವೂ ಅಲ್ಲ.ಎಲ್ಲ ವಸ್ತುಗಳು ಮತ್ತು ಕ್ರಿಯೆಗಳ ಹಿಂದೆ ಇರುವ ಸತ್ಯವೇ ಬ್ರಹ್ಮ. ಬ್ರಹ್ಮ ಬೇರೆ ಮನುಷ್ಯರು ಬೇರೆ ಅಲ್ಲ. ಮನುಷ್ಯರಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ಪರಮಾತ್ಮನು ಸರ್ವರಲ್ಲಿಯೂ ಎಲ್ಲೆಲ್ಲಿಯೂ ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಈ ದೃಷ್ಟಿಯನ್ನು ಪಡೆದವರಿಗೆ ಪ್ರಪಂಚವೆಲ್ಲವೂ ನಮ್ಮ ದೇಶವೇ. ಪ್ರಪಂಚದ ಎಲ್ಲರೂ ಅಣ್ಣ ತಮ್ಮ ಅಕ್ಕ ತಂಗಿ ಆಗಿ ಕಾಣುತ್ತಾರೆ ಎಂದು ತಿಳಿಸಿದರು.
ಸನಾತನ ಧರ್ಮ ಅರ್ಥವಾಗಲು ಬ್ರಹ್ಮಸೂತ್ರ, ಉಪನಿಷತ್ತು,ಭಗವದ್ಗೀತೆಗಳಿಗೆ ಅರ್ಥವನ್ನು ಬರೆದು ಜನಸಾಮಾನ್ಯರು ಕೂಡ ಅನುಸರಿಸುವಂತೆ ಸ್ತೋತ್ರಗಳನ್ನು ರಚಿಸಿ, ಗ್ರಂಥಗಳನ್ನು ಬರೆದು,ಪೂಜಾ ವ್ಯವಸ್ಥೆಯನ್ನು ಪರಿಷ್ಕರಿಸಿ ಕೊಟ್ಟಂತಹ ಶ್ರೀ ಶಂಕರರು ದೇಶದ ಸಾಂಸ್ಕೃತಿಕ ಏಕತೆಗಾಗಿ ಕುಂಭಮೇಳವನ್ನು ಆರಂಭಿಸಿದವರು ಶಂಕರರೆ. ಇಡೀ ಜಗತ್ತಿಗೆ ಸನ್ಮಾರ್ಗದಲ್ಲಿ ಆಧ್ಯಾತ್ಮ ಚಿಂತನೆ, ಆಧ್ಯಾತ್ಮ ಶ್ರೇಷ್ಠತೆ,ಆಧ್ಯಾತ್ಮ ರಹಸ್ಯಗಳನ್ನು ಜಗತ್ತಿಗೆ ತಿಳಿಸುತ್ತಿರುವ ಶ್ರೀ ಶಾರದಾ ಶಂಕರ ಮಠದ 37ನೇ ಸನ್ನಿಧಾನಂಗಳಾಗಿ, ತಿರುಪತಿಯ ಕುಪ್ಪ ವೆಂಕಟೇಶ ಪ್ರಸಾದ ಶರ್ಮರು ಇಂದು ಶ್ರೀ ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮಿಗಳಾಗಿ ಶ್ರೀ ಶೃಂಗೇರಿ ಶಾರದಾ ಪೀಠದ 37 ನೇ ಜಗದ್ಗುರುವಾಗಿ ಇಡೀ ಜಗತ್ತಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಆಧ್ಯಾತ್ಮದ ಬೋಧನೆಯನ್ನು ತಮ್ಮ ಧರ್ಮ ವಿಜಯ ಯಾತ್ರೆಯ ಮೂಲಕ ಇಡೀ ಭಾರತವನ್ನು ಸಂದರ್ಶಿಸಿ ಸಮಸ್ತರಿಗೂ ಶಾಸ್ತ್ರಗಳ ಅಭ್ಯಾಸದ ವಿವರಣೆಯನ್ನು, ವೇದಾಂತದ ತಿಳುವಳಿಕೆಯನ್ನು ತಮ್ಮದೇ ಆದ ವಾಗ್ಚರಿಯ ಮೂಲಕ ಆಶೀರ್ವದಿಸುತ್ತಿರುವ ವಿಧು ಶೇಖರ ಭಾರತೀಯವರ ಮಾರ್ಗದರ್ಶನ ಆಶೀರ್ವಾದ ಇಡೀ ಜಗತ್ತಿಗೆ ಸಮಸ್ತರಿಗೂ ಸಿಗಲಿ.
ಆ ಮೂಲಕ ಭಾರತವು ಆಧ್ಯಾತ್ಮಿಕ ಮಹಾಶಕ್ತಿಯಾಗಿ ಹೊರಹೊಮ್ಮಲಿ. ಶೃಂಗೇರಿ ಶಾರದಾ ಪೀಠ ಸದಾ ಕಾಲ ಧರ್ಮ ಮಾರ್ಗ, ಜ್ಞಾನಮಾರ್ಗ ಭಕ್ತಿ ಮಾರ್ಗ,ಮೋಕ್ಷ ಮಾರ್ಗ ಮತ್ತು ಮನುಷ್ಯನ ಪರಿಪೂರ್ಣತೆಗೆ ಸಾಕ್ಷಿಯಾಗಿ ರೂಪಿತವಾಗಿದೆ.
ವಿಧು ಶೇಖರ ಭಾರತಿ ಹಾಗೂ ಅವರ ಗುರುಗಳಾದ ಶ್ರೀ ಶ್ರೀ ಭಾರತೀಯ ತೀರ್ಥ ಮಹಾಸ್ವಾಮಿಗಳವರ ಆಶೀರ್ವಾದ ಹಾಗೂ 36 ಜಗದ್ಗುರುಗಳ ಪರಂಪರೆಯನ್ನು ಹೊಂದಿರುವ ಶ್ರೀ ಶೃಂಗೇರಿ ಪೀಠ ಮಹಾಪೀಠ ವಾಗಿ ಜನತೆಗೆ ಆಶೀರ್ವದಿಸುತ್ತಿರುವುದು ನಮ್ಮೆಲ್ಲರ ಪುಣ್ಯ, ಸೌಭಾಗ್ಯವೆಂದು ಋಗ್ವೇದಿ ತಿಳಿಸಿದರು.
ಶ್ರೀ ಶಂಕರಾಚಾರ್ಯ ಹಾಗೂ ವಿಧು ಶೇಖರ ಭಾರತಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟನೆ ನೆರವೇರಿಸಿದ ನಿವೃತ್ತ ಮುಖ್ಯ ಶಿಕ್ಷಕ ದಿನೇಶ್ ಮೈಸೂರು ಮಾತನಾಡಿ ಚಾತುರ್ಮಾಸದ ಸಂದರ್ಭದಲ್ಲಿ ಗುರುಗಳ ದರ್ಶನ ಮತ್ತು ಸ್ಮರಣೆಯಿಂದಲೇ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ.ಗುರುಗಳ ಪೂಜೆ ನೆರವೇರಿಸುತ್ತಿರುವ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿ ಶೃಂಗೇರಿ ವಿಧು ಶೇಖರ ಭಾರತಿ ಸ್ವಾಮೀಜಿಯವರು ನಾಗರಪಂಚಮಿಯಂದು ಜನಿಸಿ ಇಂದು ಶೃಂಗೇರಿ ಶಾರದಾ ಪೀಠದ ಜಗದ್ಗುರುವಾಗಿ ಸರ್ವರಿಗೂ ಶಾಂತಿ, ಆಧ್ಯಾತ್ಮ ಮತ್ತು ಉತ್ತಮ ಮಾರ್ಗದರ್ಶನವನ್ನು ನೀಡಿ ಧರ್ಮವನ್ನು ಸಂರಕ್ಷಿಸುತ್ತಿದ್ದಾರೆ.ಗುರು ಸ್ಮರಣೆಯಿಂದ ಅವರೆಲ್ಲರ ಶಿಷ್ಯರಿಗೆ ಶಕ್ತಿ ದೊರೆಯುತ್ತದೆ ಎಂದರು.
ಶ್ರೀ ಶಂಕರರ ಸ್ತೋತ್ರಗಳ ಪಾರಾಯಣ,ಅಷ್ಟೋತ್ತರ ಶತನಾಮಾವಳಿ,ಪೂಜೆ,ಭಜನೆ ಜರುಗಿತು.
ಶ್ರೀ ಶಾರದಾ ಭಜನಾ ಮಂಡಳಿಯ ನಿರ್ದೇಶಕರಾದ ಕುಸುಮ, ದಿನೇಶ್, ಗಣೇಶ್ ಸರಸ್ವತಿ, ವಾಣಿ, ಪೂಜಾ, ಸುಂದರ್,ಶರಣ್ಯ, ಅಧಿತಿ ಇದ್ದರು.
