ಚಾಮರಾಜನಗರದಲ್ಲಿ ಸಡಗರ-ಸಂಭ್ರಮದ ಬಕ್ರೀದ್ ಆಚರಣೆ

ಚಾಮರಾಜನಗರ: ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶುಕ್ರವಾರ ನಗರದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಬಟ್ಟೆ ಧರಿಸಿ ಕಂಗೊಳಿಸಿದ ಪುಟಾಣಿಗಳು ಕೂಡ ಪರಸ್ಪರ ಅಪ್ಪಿ ಈದ್ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಧರ್ಮಗುರು ಮೌಲಾನ ಅಬ್ದಲ್ ಹಸೀಬ್ ಬಕ್ರೀದ್ ಹಬ್ಬದ ಮಹತ್ವ ಕುರಿತು ಸಂದೇಶ ನೀಡಿದರು.
ಬಳಿಕ ದೇವರ ಹೆಸರಿನಲ್ಲಿ ಮನೆ-ಮನೆಗಳಲ್ಲಿ ಪ್ರಾಣಿ ಬಲಿ ನೆರವೇರಿಸಲಾಯಿತು. ಮಾಂಸದ ಒಂದು ಭಾಗವನ್ನು ಮನೆಗೆ, ಇನ್ನೊಂದು ಭಾಗವನ್ನು ಸಂಬಂಧಿಕರಿಗೆ ಹಾಗೂ ಮತ್ತೊಂದು ಭಾಗವನ್ನು ಬಡ-ಬಗ್ಗರಿಗೆ ದಾನ ಮಾಡುವುದು ಬಕ್ರೀದ್ ಹಬ್ಬದ ಪದ್ಧತಿಗಳಲ್ಲೊಂದು. ಅದರಂತೆ, ಕೆಲವರು ಮಾಂಸವನ್ನು ದಾನ ಮಾಡಿದರೆ, ಇನ್ನೂ ಕೆಲವರು ಅಡುಗೆ ಮಾಡಿ ಬಡವರಿಗೆ ದಾನ ಮಾಡುವ ಮೂಲಕ ತಮ್ಮ ಸೇವೆಯನ್ನು ಸಮರ್ಪಿಸಿದರು.

Leave a Reply

Your email address will not be published. Required fields are marked *