ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯಳಂದೂರು ಪಿಎಎಲ್ ಡಿ ಬ್ಯಾಂಕ್ ನಿರ್ದೇಶಕ ಹೊನ್ನೂರು ಸಿದ್ದಪ್ಪಸ್ವಾಮಿ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುಟ್ಟರಂಗಶೆಟ್ಟಿ ಅವರು ರಾಜ್ಯದ ಉಪ್ಪಾರ ಜನಾಂಗದ ಏಕೈಕ ಶಾಸಕರು. ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಾರೆ. ಉಪ್ಪಾರ ಸಮಾಜ ಮತದಾರರು ಹೆಚ್ಚು ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಜಾಗೃತಿ ಮೂಡಿಸಿದ್ದಾರೆ. 2008ರಿಂದ ನಿರಂತರ ಆಯ್ಕೆಯಾಗಿದ್ದಾರೆ. ಜಿಲ್ಲಾ ಕೇಂದ್ರದ ಅಭಿವೃದ್ಧಿ ಗಾಗಿ ಶ್ರಮಿಸಿದ್ದಾರೆ ಎಂದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಕಾಂಗ್ರೆಸ್ ಪಕ್ಷದಿಂದಲ್ಲೇ ರಾಜಕೀಯ ಆರಂಭಿಸಿದರು. ಅಧಿಕಾರ ಇರಲಿ, ಇಲ್ಲದಿದ್ದ ಸಂದರ್ಭದಲ್ಲೂ ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ಅವರಿಗೆ ಬೇರೆ ಪಕ್ಷಗಳಿಂದಲ್ಲೂ ಅಫರ್ ಬಂದರು ಕೂಡ ಪಕ್ಷಾಂತರ ಮಾಡದೆ ಕಾಂಗ್ರೆಸ್ ನಲ್ಲಿ ನಿಷ್ಠಾವಂತರಾಗಿ ಪಕ್ಷ ಬೆಳೆಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟ ಅಭಿಮಾನಿಯಾಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಕಾಂಗ್ರೆಸ್ ವರಿಷ್ಠರಲ್ಲಿಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಟ್ಟೆ ಮನೆ ಯಜಮಾನ ಆನಂದ್, ಸೋಮಣ್ಣೇಗೌಡ, ಗುರುಲಿಂಗಯ್ಯ, ಮಹಾದೇವಸ್ವಾಮಿ, ಧನರಾಜು, ಮರಿಲಿಂಗ ಇತರರು ಹಾಜರಿದ್ದರು.