ಹಣಕ್ಕಾಗಿ ಉದ್ಯೋಗ ಆಮಿಷ ಒಡ್ಡುವ ವಂಚಕರ ಬಗ್ಗೆ ನಿಗಾ ವಹಿಸಿ : ಡಿ.ವೈ.ಎಸ್.ಪಿ ಪವನ್‍ಕುಮಾರ್

ಚಾಮರಾಜನಗರ: ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುವ ಬೃಹತ್ ಜಾಲ ಸಕ್ರಿಯವಾಗಿದ್ದು, ಇಂತಹ ಸೈಬರ್ ವಂಚಕರ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೈಬರ್ ಕ್ರೈಂ ಠಾಣೆಯ ಡಿ.ವೈ.ಎಸ್.ಪಿ. ಎಂ.ಎಸ್. ಪವನ್‍ಕುಮಾರ್ ಅವರು ತಿಳಿಸಿದರು.

ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೈಬರ್ ಮಾಸಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಖಾಯಂ ಉದ್ಯೋಗ, ಪಾರ್ಟ್‍ಟೈಮ್ ಹಾಗೂ ವರ್ಕ್ ಫ್ರಂ ಹೋಮ್ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುವ ಸೈಬರ್ ವಂಚಕರ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಲೈಂಗಿಕ ವಿಷಯ, ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಬಳಸಿಕೊಂಡು ಮಹಿಳೆಯರನ್ನು ಬೆದರಿಸಿ ಹಣ ಅಥವಾ ಮತ್ತಷ್ಟು ಖಾಸಗಿ ಚಿತ್ರಗಳು ಅಥವಾ ಲೈಂಗಿಕ ಅನುಕೂಲಕ್ಕೆ ಒತ್ತಾಯಿಸುವ ಸೈಬರ್ ವಂಚಕರ ಬಗ್ಗೆಯೂ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಡಿ.ವೈ.ಎಸ್.ಪಿ ಅವರು ಸಲಹೆ ಮಾಡಿದರು.

ಅಪರಿಚಿತ ವ್ಯಕ್ತಿಗಳು ಬ್ಯಾಂಕಿನಿಂದ ಮಾತನಾಡುತ್ತಿರುವುದಾಗಿ ನಂಬಿಸಿ ಒ.ಟಿ.ಪಿ ಪಡೆದು ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವ ವಂಚನೆಯು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಾಗರೂಕರಾಗಿರಬೇಕೆಂದು ತಿಳಿಸಿದರು.

ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ಹಣವನ್ನು ದ್ವಿಗುಣ ಮಾಡಿಕೊಡುವ ಬಗ್ಗೆ ವಂಚಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಆಮಿಷಕ್ಕೆ ಯಾರು ಬಲಿಯಾಗಬಾರದೆಂದು ಡಿ.ವೈ.ಎಸ್.ಪಿ ಅವರು ಸಲಹೆ ನೀಡಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಲೋಕೇಶ್, ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಪ್ರಭು, ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *