ಪೂರ್ವಜರ ಮೋಕ್ಷಪ್ರಾಪ್ತಿಗಾಗಿ ಗಂಗೆಯನ್ನೆ ಧರೆಗಿಳಿಸಿದ ಮಹಾನ್ ಪುರುಷ ಭಗೀರಥರು : ಶಾಸಕ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ತನ್ನ ಪೂರ್ವಜರ ಮೋಕ್ಷಪ್ರಾಪ್ತಿಗಾಗಿ ಸಾಕ್ಷಾತ್ ಗಂಗೆಯನ್ನೇ ಧರೆಗಿಳಿಸಿದ ಮಹಾನ್ ಪುರುಷ ಭಗೀರಥ ಮಹರ್ಷಿಗಳ ಸ್ಮರಣೆ ಇಂದಿಗೂ ಪ್ರಸ್ತುತವಾಗಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

   ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದ ದೀಪ ಬೆಳಗಿಸಿ, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

   ಪೂರ್ವಜರ ಬಗ್ಗೆ ಅಪಾರ ಗೌರವ, ನಂಬಿಕೆ ಇಟ್ಟಿದ್ದ ಮಹರ್ಷಿ ಭಗೀರಥರು ಅವರಿಗೆ ಮೋಕ್ಷ ದೊರಕಿಸಲು ಎಂತಹ ಸಂಕಷ್ಟಗಳು ಎದುರಾದರೂ ಉಗ್ರ ತಪಸ್ಸು ಮಾಡುವ ಮೂಲಕ ಎಡೆಬಿಡದ ಸತತ ಪ್ರಯತ್ನಗಳಿಂದ ದೇವಾನುದೇವತೆಗಳನ್ನು ಮೆಚ್ಚಿಸಿದರು. ಭಗೀರಥರ ಪ್ರಯತ್ನ ಈಗಲೂ ಪ್ರಚಲಿತದಲ್ಲಿದೆ. ಭಗೀರಥರು ಪುರಾಣ ಕಾಲಘಟ್ಟದ ವ್ಯಕ್ತಿಯಾಗಿದ್ದರೂ ಅವರ ಆದರ್ಶ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಹಾಗೂ ಅನುಸರಿಸಬೇಕು ಎಂದರು.

  ಭಗೀರಥರು ಕ್ಷತ್ರಿಯ ವಂಶದವರಾಗಿದ್ದಾರೆ. ಹಿಂದೆ ಉಪ್ಪನ್ನು ತಯಾರಿಸಿ ಶ್ರೀಮಂತವಾಗಿದ್ದ ಉಪ್ಪಾರ ಸಮಾಜ ಬಳಿಕ ಬ್ರಿಟಿಷರ ವ್ಯತಿರಿಕ್ತ ನೀತಿಗಳಿಂದ ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿತು. ಪ್ರಸ್ತುತ ಭಗೀರಥರ ಜಯಂತಿಯನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ. ಸದ್ಯದಲ್ಲೇ ಎಲ್ಲರೊಂದಿಗೆ ಚರ್ಚಿಸಿ ಮತ್ತೊಂದು ದಿನಾಂಕ ನಿಗದಿಪಡಿಸಿ ಚಾಮರಾಜನಗರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು. ಸಮುದಾಯದ ಸಮಸ್ಯೆಗಳನ್ನು ಸಮಾವೇಶದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

  ಕಾರ್ಯಕ್ರಮದಲ್ಲಿ ಮಹರ್ಷಿ ಭಗೀರಥರ ಕುರಿತು ಉಪನ್ಯಾಸ ನೀಡಿದ ನಾಗವಳ್ಳಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸೋಮಣ್ಣ ಅವರು ಮಾತನಾಡಿ ಭಗೀರಥರ ಜಯಂತಿಯು ಭೂಮಿಗೆ ಗಂಗಾವಾತರಣೆಯಾದ ಪುಣ್ಯದಿನವಾಗಿದೆ. ತಮ್ಮ ಮುತ್ತಾತರಿಗೆ ಮೋಕ್ಷ ನೀಡಲು ಸಾವಿರ ವರ್ಷಗಳ ಕಾಲ ತಪಗೈದು ಗಂಗೆಯನ್ನು ಭೂಮಿಗೆ ಕರೆತಂದ ಮಹಾನ್ ಸಿದ್ಧಿಪುರುಷರೆಂದರೆ ಅದು ಭಗೀರಥರು ಮಾತ್ರ. ಅವರ ಜೀವನ ಸಾಧನೆಗಳನ್ನು ಇಂದು ಮೆಲುಕು ಹಾಕುವ ಸುಸಂದರ್ಭವಾಗಿದೆ ಎಂದರು.

  ಉಪ್ಪಾರ ಸಮುದಾಯ ಶೈಕ್ಷಣಿಕವಾಗಿ ಮುನ್ನೆಡೆಯಬೇಕಿದೆ. ಹಂಪಿ ವಿಶ್ವವಿದ್ಯಾಲಯ ಈ ಬಗ್ಗೆ ರಾಜ್ಯಾದ್ಯಂತ ಸಂಶೋಧನೆ ನಡೆಸಿ ವರದಿ ನೀಡಿದೆ. ಸಮಾಜದ ನಾಗರಿಕರು ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕೊಡಿಸಲು ಮುಂದೆ ಬರಬೇಕು. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ದೇಶದ ಸಂಪತ್ತು ಸಮಾನವಾಗಿ ಹಂಚಿಕೆ ಆಗಬೇಕು ಎಂಬುದು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಅವರ ಆಶಯಗಳು ಈಡೇರಬೇಕು ಎಂದು ಸೋಮಣ್ಣ ಅವರು ತಿಳಿಸಿದರು.

  ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಜಿಲ್ಲಾಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *