ಚಾಮರಾಜನಗರ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಸಿ. ಶಂಕರ ಅಂಕನಶೆಟ್ಟಿಪುರ ಅವರು ಇಂದು ಯಳಂದೂರು ಹಾಗೂ ಕೊಳ್ಳೇಗಾಲ ಪಟ್ಟಣಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಪೌರಕಾರ್ಮಿಕರ ಸಮಸ್ಯೆ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಯಳಂದೂರು ಪಟ್ಟಣಕ್ಕೆ ಮೊದಲು ಭೇಟಿ ನೀಡಿದ ಸಿ. ಶಂಕರ ಅಂಕನÀಶೆಟ್ಟಿಪುರ ಅವರು ಅಲ್ಲಿನ ಪೌರಕಾರ್ಮಿಕರ ಕಾಲೋನಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಪೌರಕಾರ್ಮಿಕರು ತಮಗೆ ಮನೆಗಳ ಅಗತ್ಯವಿದೆ. ಈಗಿರುವ ಮನೆಗಳಿಗೆ ಮೇಲ್ಚಾವಣಿಗೆ ಶೀಟ್ ಹಾಕಲಾಗಿದೆ. ನಮಗೆ ಪ್ರತ್ಯೇಕ ನಿವೇಶನ ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಬೇಕು. ಎಂಬುದು ಸೇರಿದಮತೆ ಇನ್ನಿತರ ಅಹವಾಲುಗಳನ್ನು ಸಲ್ಲಿಸಿದರು.
ಬಳಿಕ ಯಳಂದೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡಬೇಕು. ಗೃಹಭಾಗ್ಯ ಯೋಜನೆಯಡಿಯಲ್ಲಿ ಶೀಘ್ರವೇ ಮನೆಗಳನ್ನ ನಿರ್ಮಿಸಿ ಕೊಡಬೇಕು. ಗುಣಮಟ್ಟದ ಬೆಳಗಿನ ಉಪಹಾರ ನೀಡಬೇಕು. ವಿಶ್ರಾಂತಿ ಗೃಹಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಪೌರಕಾರ್ಮಿಕರು ಕೆಲಸ ಮಾಡುವಾಗ ಸುರಕ್ಷತೆ ದೃಷ್ಠಿಯಿಂದ ಗ್ಲೌಸ್ ಹಾಗೂ ಬೂಟ್ ಗಳನ್ನು ಧರಿಸಬೇಕು. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಆಯೋಗದ ಸದಸ್ಯರಾದ ಸಿ. ಶಂಕರ ಅಂಕನÀಶೆಟ್ಟಿಪುರ ಅವರು ಸಲಹೆ ಮಾಡಿದರು.
ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ, ಇನ್ನಿತರ ಅಧಿಕಾರಿಗಳು ಇದ್ದರು.
ಕೊಳ್ಳೇಗಾಲ ಪಟ್ಟಣಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿದರು. ಈ ವೇಳೆ ಮಾತನಾಡಿದ ಪೌರಕಾರ್ಮಿಕರು ವಸತಿ ವ್ಯವಸ್ಥೆ ತುರ್ತಾಗಿ ಆಗಬೇಕಿದೆ. ಬಹುಮಹಡಿ ಕಟ್ಟಡಗಳಲ್ಲಿ ಮನೆ ನಿರ್ಮಿಸಿಕೊಡುವ ಬದಲು ಪ್ರತ್ಯೇಕ ಮನೆಗಳನ್ನು ನಿರ್ಮಾಣ ಮಾಡಿ ನೀಡಬೇಕು. ಸರ್ಕಾರಿ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿ ಕೊಡಬೇಕು. ತಮ್ಮ ಮಕ್ಕಳು ವಿದ್ಯಾರ್ಹತೆ ಹೊಂದಿದ್ದಾರೆ. ಪದವೀಧರರು ಇದ್ದಾರೆ. ಇವರಿಗೆ ಉದ್ಯೋಗ ಅವಕಾಶಗಳು ಸಿಗಬೇಕು ಎಂಬುದೂ ಸೇರಿದಂತೆ ಇನ್ನಿತರ ಅಹವಾಲುಗಳನ್ನು ಮುಂದಿಟ್ಟರು.
ನಗರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರ ಅಹವಾಲುಗಳನ್ನು ಸಿ. ಶಂಕರ ಅಂಕನÀಶೆಟ್ಟಿಪುರ ಅವರು ಆಲಿಸಿದರು. ಅಧಿಕಾರಿಗಳೊಂದಿಗೆ ಪೌರಕಾರ್ಮಿಕರ ಸಮಸ್ಯೆಗಳು, ಒದಗಿಸಬೇಕಿರುವ ಸೌಲಭ್ಯಗಳ ಕುರಿತು ಚರ್ಚಿಸಿದರು. ಇದೇ ವೇಳೆ ಆರೋಗ್ಯ ವಿಮೆ ಕಾರ್ಡುಗಳನ್ನು ಪೌರಕಾರ್ಮಿಕರಿಗೆ ವಿತರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ, ನಗರಸಭೆ ಆರೋಗ್ಯ ನಿರೀಕ್ಷಕರಾದ ಭೂಮಿಕ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಕ್ಷೇತ್ರಾಭಿವೃದ್ದಿ ಅಧಿಕಾರಿ ಚಂದ್ರ, ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.