ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ಶ್ರೀ ಚಾಮರಾಜೇಶ್ವರ ಆಷಾಡ ರಥೋತ್ಸವ, ಜಾತ್ರೆಯು ಜುಲೈ 28 ರಂದು ನಡೆಯಲಿದ್ದು ಈ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.
ರಥೋತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ 04 ಡಿಎಸ್‌ಪಿ, 11 ಪೊಲೀಸ್ ಇನ್ಸ್‌ಪೆಕ್ಟರ್, 22 ಸಬ್ ಇನ್ಸ್‌ಪೆಕ್ಟರ್, 47 ಎಎಸ್‌ಐ , 270 ಜನ ಪೊಲೀಸರು, 100 ಜನ ಗೃಹರಕ್ಷಕ ದಳದವರು, 02 ಕೆ.ಎಸ್.ಆರ್.ಪಿ. 04 ಡಿ.ಎ.ಆರ್. ತುಕಡಿಗಳು, ಒಂದು ಕಮಾಂಡೋ ಪಡೆಯನ್ನು ನಿಯೋಜಿಸಲಾಗಿದೆ.
ಜಾತ್ರೆಗೆ ಬರುವ ಹೆಣ್ಣುಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಈವ್ ಟೀಸಿಂಗ್ ಮಾಡುವಂತಹ ಪುಂಡರ ಹಾವಳಿ ತಡೆಗಟ್ಟಲು ಪ್ರತ್ಯೇಕವಾಗಿ ತಂಡವನ್ನು ಹಾಗೂ “ಅಕ್ಕಪಡೆಯ” ಅಧಿಕಾರಿ,ಸಿಬ್ಬಂದಿಯನ್ನು ನಿಯೋಜಿಸಿದ್ದು, ಈವ್ ಟೀಸಿಂಗ್ ಮಾಡುವವರು ಕಂಡುಬಂದಲ್ಲಿ ಅಂತಹವರ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕ್ರಮವಹಿಸಲಾಗುವುದು.
ಜಾತ್ರಾ ಸಂದರ್ಭದಲ್ಲಿ ಸರಗಳ್ಳತನ ಪ್ರಕರಣಗಳು ಘಟಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕು. ಜಾತ್ರೆಗೆ ಚಿನ್ನಾಭರಣ ಧರಿಸಿ ಬರುವ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ಮೋಸ ಮಾಡುವ, ವಂಚಿಸುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು.ಈ ಸಂಬಂಧ ಮಪ್ತಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.
ಜಾತ್ರೆಯಲ್ಲಿ ಕಳ್ಳತನ, ಈವ್ ಟೀಸಿಂಗ್, ಇತ್ಯಾದಿಗಳನ್ನು ಸಮರ್ಪಕವಾಗಿ ತಡೆಗಟ್ಟುವ ಸಂಬಂಧ ರಥೋತ್ಸವ ಸಾಗುವ ಮಾರ್ಗದಲ್ಲಿ, ಜನಸಂದಣಿ ಕಂಡುಬರುವಂತಹ ಪ್ರದೇಶಗಳಲ್ಲಿ ಪೊಲೀಸ್ ಇಲಾಖಾ ವತಿಯಿಂದ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಸಿ.ಸಿ ಕ್ಯಾಮೆರಾದಲ್ಲಿ ಸಾರ್ವಜನಿಕರ ಚಲನ ವಲನಗಳನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೆರೆಯಲಾಗಿರುವ ಪೊಲೀಸ್ ಕಮಾಂಡೆಂಟ್ ಸೆಂಟರ್‌ನಲ್ಲಿ ಸೂಕ್ಷ್ಮವಾಗಿ ವೀಕ್ಷಣೆ ಮಾಡಲಾಗುತ್ತದೆ. ಕಳ್ಳತನ ತಡೆಗಟ್ಟುವ ಉದ್ದೇಶದಿಂದ ಜಾತ್ರೆಗೆ ಬರುವಂತಹ ಚಾಳಿ ಬಿದ್ದ ಅಪರಾಧಿಗಳು, ಎಂ.ಒ ಆಸಾಮಿಗಳ ಬಗ್ಗೆ ಸೂಕ್ತ ನಿಗಾವಹಿಸಿ ಕ್ರಮವಹಿಸಲಾಗುತ್ತಿದೆ.
ಜಾತ್ರೆಯು ಸುಗಮವಾಗಿ ನಡೆಯುವ ಹಿತದೃಷ್ಟಿಯಿಂದ ಕರ್ಕಶ ಶಬ್ದಗಳನ್ನು ಉಂಟು ಮಾಡುವ ಸಾಧನಗಳನ್ನು ಜಾತ್ರೆಯ ಸಮಯದಲ್ಲಿ ಮಾರಾಟ ಮಾಡದಂತೆ ಕ್ರಮವಹಿಸಿದ್ದು, ಯಾವುದೇ ಕಾರಣಕ್ಕೂ ದೇವಸ್ಥಾನದ ಅಕ್ಕಪಕ್ಕ ಇರುವ ಅಂಗಡಿ ಮುಂಗಟ್ಟುಗಳವರು. ಇನ್ನಿತರೆ ಕಡೆ ಇರುವ ಅಂಗಡಿಗಳವರು ತಮ್ಮ ಅಂಗಡಿಯಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಯಾವುದೇ ರೀತಿಯ ಸಾಧನಗಳನ್ನು ಮಾರಾಟ ಮಾಡಬಾರದು.ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಕ್ರಮವಹಿಸಲಾಗುವುದು.ಈ ಸಂಬಂಧ ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ.
ದೇವಸ್ಥಾನದ ಸುತ್ತಮುತ್ತ, ರಥೋತ್ಸವ ಸಾಗುವ ಮಾರ್ಗದಲ್ಲಿ ಕಡ್ಡಾಯವಾಗಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಿದೆ.ಜಾತ್ರೆಗೆ ಬರುವ ಸಾರ್ವಜನಿಕರ ವಾಹನ ಪಾರ್ಕಿಂಗ್‌ಗಾಗಿ ಚಾಮರಾಜನಗರ ಪಟ್ಟಣದ ಪಚ್ಚಪ್ಪ ಸರ್ಕಲ್ ಬಳಿ ಇರುವ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಪಕ್ಕದಲಿರುವ ಖಾಸಗಿ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.ಜುಲೈ 28 ರಂದು ಬೆಳಿಗ್ಗೆ 6 ಗಂಟೆಯಿಂದಲೇ ಚಾಮರಾಜನಗರ ಪಟ್ಟಣದ ದೇವಸ್ಥಾನದ ಸುತ್ತಾ ಮುತ್ತಾ ರಥ ಸಾಗುವ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಗುಂಡ್ಲುಪೇಟೆ, ನಂಜನಗೂಡು, ತಮಿಳುನಾಡಿನ ಸತ್ತಿ ಕಡೆಯಿಂದ ಬರುವಂತಹ ಸಾರ್ವಜನಿಕರು ತಮ್ಮ ವಾಹನಗಳನ್ನು ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಪಕ್ಕದಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕೊಳ್ಳೇಗಾಲ, ನರಸೀಪುರ, ಚಂದಕವಾಡಿ ಮುಂತಾದ ಕಡೆಗಳಿಂದ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪಚ್ಚಪ್ಪ ಸರ್ಕಲ್ ಬಳಿ ಇರುವ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಸೂಚಿಸಿದೆ.
ಚಾಮರಾಜನಗರ ಪಟ್ಟಣದಲ್ಲಿ ಒಟ್ಟು 07 ಕಡೆಗಳಲ್ಲಿ ಚೀತಾ ಗಸ್ತು ನಿರ್ವಹಣೆ ಮಾಡಲು ನಿಯೋಜಿಸಿದ್ದು, ಜಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿರುತ್ತದೆ.
ಚಾಮರಾಜನಗರ ಪಟ್ಟಣದ ಜಾತ್ರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಲವು ನುರಿತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಪ್ತಿ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಬಂದೋಬಸ್ತ್ ನ ಸಂಪೂರ್ಣ ಉಸ್ತುವಾರಿಯನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎನ್ ಶಶಿಧರ ಮತ್ತು ಚಾಮರಾಜನಗರ ಉಪವಿಭಾಗದ ಉಪಾಧೀಕ್ಷಕರಾದ ಎನ್. ಸ್ನೇಹರಾಜ್ . ಜೆ. ಮೋಹನ್, ಕೊಳ್ಳೇಗಾಲ ಉಪ ವಿಭಾಗದ ಉಪಾಧೀಕ್ಷಕರಾದ ಜೆ. ಮೋಹನ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ