ಯಳಂದೂರು: ದೇಶಾದ್ಯಂತ ನಡೆಯುತ್ತಿರುವ ನೀಟ್ ವಿದ್ಯಾರ್ಥಿಗಳ ಹೋರಾಟಕ್ಕೆ ಯಳಂದೂರು ವಕೀಲರು ಕಲಾಪದಿಂದ ಹೊರಗುಳಿದು ಬೆಂಬಲ ಸೂಚಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ನೀಟ್ ವಿದ್ಯಾರ್ಥಿಗಳ ಪರ ಬೆಂಬಲ ಸೂಚಿಸಿದ್ದರಿಂದ ಕಲಾಪದಿಂದ ಹೊರಗುಳಿದು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲು ನಿರ್ಣಯಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲರಾದ ಬಸವಟ್ಟಿ ಮಹದೇವಸ್ವಾಮಿ, ಹಲವು ಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ವಿದ್ಯಾರ್ಥಿಗಳ ಹೋರಾಟ ಮತ್ತು ಬೇಡಿಕೆ ನ್ಯಾಯಯುತವಾಗಿದೆ. ದೇಶದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಹೋರಾಟ ಮಾಡುವ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಲಾಠಿ ಚಾರ್ಜ್ ಮಾಡಿಸಿದ್ದು ಅಕ್ಷಮ್ಯ. ಹಿಂದೆಯೂ ವರ್ಷಾನುಗಟ್ಟಲೇ ನಡೆದ ರೈತರ ಹೋರಾಟದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಗಳನ್ನು ಹತ್ತಿಕ್ಕಬಾರದು.
ತಂತ್ರಾಪೂರ್ವದಿಂದಲೂ ಎಲ್ಲಾ ಹೋರಾಟಗಳನ್ನೂ ಮುನ್ನಡೆಸಿದ್ದೇ ವಕೀಲರ ಸಮುದಾಯ. ಹೀಗಾಗಿ ವಿದ್ಯಾರ್ಥಿಗಳ ಹೋರಾಟವನ್ನು ವಕೀಲ ಸಮುದಾಯ ಬೆಂಬಲಿಸುವ ಅಗತ್ಯವಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ನೀಟ್ ಸೇರಿದಂತೆ ಎಲ್ಲಾ ರೀತಿಯ ಉನ್ನತ ಹುದ್ದೆಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವ ಸಂಪೂರ್ಣ ಅಧಿಕಾರವನ್ನು ಆಯಾಯ ರಾಜ್ಯ ಸರ್ಕಾರಗಳಿಗೆ ನೀಡಬೇಕು
ಎಂದರು.
ಸಭೆಯ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜೈಶಂಕರ್ ವಹಿಸಿದ್ದರು. ಉಪಾಧ್ಯಕ್ಷ ಎಂ.ಮುತ್ತುರಾಜು, ಕಾರ್ಯದರ್ಶಿ ಜಿ.ಎನ್.ಸಂಪತ್, ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ಖಜಾಂಚಿ ರಂಜಿತಾ, ರ್ವಕೀಲರಾದ ಸಿ.ಸಿದ್ದರಾಜು, ಕೆ.ಬಿ.ಶಶಿಧರ್, ಸಿ.ಮಹದೇವಸ್ವಾಮಿ, ಎನ್.ಕೃಷ್ಣ, ರವೀಶ್, ಶಾಂತರಾಜು, ಎಂ.ನಾಗರಾಜು, ಎಂ.ಕುಮಾರಸ್ವಾಮಿ, ಆರ್.ಕುಮಾರಸ್ವಾಮಿ, ಶಶಿಕುಮಾರ್, ಕೆ.ಕಾಂತರಾಜು, ಪರಶಿವಮೂರ್ತಿ, ಸಿಂಧು, ಚಂದನಾ, ಶ್ರೀನಿವಾಸಮೂರ್ತಿ, ನಂಜುಂಡಸ್ವಾಮಿ, ಮೇಘ, ಮಹೇಂದ್ರ, ಮಹೇಶ್ವರಿ ಉಪಸ್ಥಿತರಿದ್ದರು.