ಚಾಮರಾಜನಗರ: ನಗರದ 26ನೇ ವಾಡ್Fನಲ್ಲಿರುವ ವಿವೇಕನಗರ ಬಡಾವಣೆಯ ವೃತ್ತಕ್ಕೆ ಶ್ರೀ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗಿದ್ದು, ಮರಿಯಾಲ ಮಠ ಹಾಗೂ ನಗರದ ವಿರಕ್ತ ಮಠದ ಶ್ರೀಗಳು ನಾಮಫಲಕ ಅನಾವರಣ ಮಾಡಿದರು.
ಅಲ್ಲದೇ ವರ್ತಕರ ಭವನದ ಪಕ್ಕದ ಪೆಟ್ರೋಲ್ ಬಂಕ್ ಪಕ್ಕದಿಂದ ವಿವೇಕನಗರಕ್ಕೆ ಬರುವ ರಸ್ತೆಗೆ ಶರಣೆ ಅಕ್ಕ ಮಹಾದೇವಿ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣ ಮಾಡಲಾಯಿತು.
ನೂತನ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರಿಯಾಲ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚೆನ್ನಬಸವಸ್ವಾಮೀಜಿ ನಾಮಫಲಕ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ, 12 ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಹೇಳದಿರುವ ಯಾವ ವಿಚಾರಗಳೂ ಇಲ್ಲ. ಅವರು ವಚನಗಳ ಮೂಲಕ ಸಮಾಜದ ಎಲ್ಲ ವಿಷಯಗಳ ಬಗ್ಗೆ ತಿಳಿಸಿದ್ದಾರೆ ಎಂದರು.
ಬಸವಣ್ಣನವರು ಹೇಳಿದ ತತ್ವ ವಿಚಾರಗಳನ್ನು ನಾವೆಲ್ಲರೂ ಪ್ರಸರಿಸಬೇಕು. ವಚನಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಸಮಾಜದ ಅಂಕುಡೊಂಕು, ಡಂಭಾಚಾರಗಳನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಎತ್ತಿ ಹಿಡಿದಿದ್ದಾರೆ. ಅವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.
ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದರು. ವೈಚಾರಿಕತೆಯನ್ನು ಸಾರಿದರು. ಬಸವಣ್ಣನವರ ನಾಮಫಲಕ ಅಳವಡಿಸಿರುವುದು ಶ್ಲಾಘನೀಯ. ಅವರ ವಿಚಾರಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.
ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಆರ್. ಎಂ. ಸ್ವಾಮಿ ಮಾತನಾಡಿ ಈ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು. ತಾವು 1 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು.
ವಿವೇಕನಗರ ಮುಖಂಡ ಬಿಎಸ್‌ಎನ್‌ಎಲ್ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವೃತ್ತಕ್ಕೆ ಬಸವೇಶ್ವರರ ಹೆಸರಿಡಬೇಕೆಂಬ ಪ್ರಸ್ತಾವನೆ ಮೂಡಿಬಂತು. ಇದಕ್ಕೆ ನಗರಸಭೆ ಮಾಜಿ ಸದಸ್ಯೆ ಕುಮುದಾ ಕೇಶವಮೂರ್ತಿ ಅವರು ನಗರಸಭೆಯಲ್ಲಿ ಅನುಮತಿ ಕೊಡಿಸಲು ಸಹಾಯ ಮಾಡಿದರು ಎಂದು ಕೃತಜ್ಞತೆ ಸಲ್ಲಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ಶ್ವೇತಾ ಶಶಿಧರ್, ನಗರಸಭೆ ಮಾಜಿ ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿದರು.
ಜಿ. ಶಶಿಧರ್, ಉದ್ಯಮಿ ಬಸವಟ್ಟಿಗೆ ಬಸವರಾಜು, ಸಿದ್ದಮಲ್ಲಪ್ಪ, ಯೋಗೀಶ್, ನಂದೀಶ್ ಕೊಮಾರನಪುರ, ದೊ.ರಾ.ಪೇಟೆ ಕುಮಾರ್, ನಾಗರಾಜು, ಕಿಲಗೆರೆ ಚಂದ್ರಶೇಖರ್, ಎಸ್‌ಜಿಎಂ ಪ್ರಭುಸ್ವಾಮಿ, ಸಿ. ನಾಗಣ್ಣ, ಡಿ.ಎಸ್. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.