ಯಳಂದೂರು: ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘಕ್ಕೆ ರಾಜ್ಯ ವಕೀಲರ ಪರಿಷತ್ ನೂತನ ಸದಸ್ಯ ಕೆ.ಎಸ್.ಮಹದೇವಪ್ರಸಾದ್ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು.
ಬುಧವಾರ ಮದ್ಯಾಹ್ನದ ವೇಳೆಗೆ ತಮ್ಮ ಸಹೋದ್ಯೋಗಿಗಳ ಸಮೇತ ವಕೀಲರ ಸಂಘಕ್ಕೆ ಆಗಮಿಸಿ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ ಕೆ.ಎಸ್.ಮಹದೇವಪ್ರಸಾದ್, ನಾನು ವಕೀಲಿ ವೃತ್ತಿಯಲ್ಲಿ ಮೈಸೂರು ನ್ಯಾಯಾಲಯದಲ್ಲಿ ನಿರತನಾಗಿದ್ದರೂ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದವನು ಎಂಬ ಹೆಮ್ಮೆಯನ್ನು ಇಟ್ಟುಕೊಂಡು ಮೊದಲ ಬಾರಿಗೆ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಅತಿಹೆಚ್ಚಿನ ಮತಗಳನ್ನು ನೀಡಿ ಮೊದಲ ಸುತ್ತಿನ ಮತ ಎಣಿಕೆಯಲ್ಲೇ ಗೆಲುವು ಸಾಧಿಸಲು ತಾವೆಲ್ಲರೂ ಕಾರಣರಾಗಿದ್ದೀರಿ. ಯಳಂದೂರು ವಕೀಲರ ಸಂಘಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳಿಗೆ ನೆರವು ಹಾಗೂ ಪ್ರತಿಯೊಬ್ಬ ವಕೀಲರಿಗೂ ಆರೋಗ್ಯ ವಿಮೆ ಸೇರಿದಂತೆ ನನ್ನ ಹಂತದಲ್ಲಿ ಆಗಬಹುದಾದ ಎಲ್ಲಾ ರೀತಿಯ ನೆರವನ್ನೂ ನೀಡಲು ಶ್ರಮಿಸುತ್ತೇನೆ. ವಕೀಲರ ಹಿತ ಕಾಪಾಡುವುದಷ್ಟೇ ನನ್ನ ಗುರಿಯಾಗಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೆಯೇ ಇರಲಿ, ನಿಮಗಾಗಿ ಹೆಚ್ಚಿನ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಹಿರಿಯ ವಕೀಲರಾದ ಬಸವಟ್ಟಿ ಮಹದೇವಸ್ವಾಮಿ ಮಾತನಾಡಿ, ಯಳಂದೂರು ನ್ಯಾಯಾಲಯಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ರವರ ಗಮನ ಸೆಳೆಯಲು ಬೆಂಗಳೂರಿಗೆ ಆಗಮಿಸುತ್ತೇವೆ. ನೀವೇ ನೇತೃತ್ವ ವಹಿಸಿ ನಮ್ಮ ಬೇಡಿಕೆಗಳ ಬಗ್ಗೆ ತಿಳಿಸಬೇಕು. ಹಾಗೆಯೇ ನಮ್ಮ ಸಂಘದ ಹಿರಿಯ ವಕೀಲರಾದ ಮಾದೇಶ್ ರವರು ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಪರಿಷತ್ ವತಿಯಿಂದ ಅಗತ್ಯ ನೆರವು ಒದಗಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ವಕೀಲರ ಪರಿಷತ್ ಸದಸ್ಯ ಮಹದೇವಪ್ರಸಾದ್ ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಜಿ.ಎನ್.ಸಂಪತ್ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ಖಜಾಂಚಿ ರಂಜಿತಾ, ಮಾಜಿ ಅಧ್ಯಕ್ಷರಾದ ಸಿ.ಸಿದ್ದರಾಜು, ಸಿ.ಆರ್.ನಾಗರಾಜು, ಕೃಷ್ಣ, ಶಶಿಧರ್, ಶಾಂತರಾಜು, ಮಾಜಿ ಜಿಲ್ಲಾಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ವಕೀಲರಾದ ಜಿ.ಸಂತೋಷ್ ಕುಮಾರ್, ಎಂ.ನಾಗರಾಜು, ಜಿ.ಪಿ.ನಾಗರಾಜು, ಕಾಂತರಾಜು, ಕುಮಾರಸ್ವಾಮಿ, ಅಶ್ವಿನ್ ಕುಮಾರ್, ಪರಶಿವಮೂರ್ತಿ, ಮಹೇಂದ್ರ ಉಪಸ್ಥಿತರಿದ್ದರು.