ಚಾಮರಾಜನಗರ: ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಕನ್ನಡ ಅನುಷ್ಠಾನ ಪ್ರಗತಿ ಕುರಿತು ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸರ್ಕಾರಿ ಅಧೀನದ ಎಲ್ಲ ಇಲಾಖೆಗಳಲ್ಲಿ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನವಾಗಬೇಕು ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದ 24 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು 1200ಕ್ಕೂ ಹೆಚ್ಚು ವಿಭಾಗಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಆಡಳಿತದಲ್ಲಿ ಕನ್ನಡ ಅನುಷ್ಟಾನದ ಬಗ್ಗೆ ಚರ್ಚಿಸಿದ್ದೇನೆ. ಗಡಿಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಹಲವು ಭಾಷೆಗಳಿದ್ದರೂ ಭಾಷೆ ಸಂಘರ್ಷ ಇಲ್ಲವಾಗಿದೆ. ಈ ಭಾಗದಲ್ಲಿ ಕನ್ನಡದ ಸೊಗಡು ಉಳಿದಿದೆ. ಕನ್ನಡ ಪ್ರೀತಿಸುವ ಜನರಿದ್ದಾರೆ. ಆಡಳಿತದಲ್ಲಿ ಕನ್ನಡ ಅನುಷ್ಠಾನದ ಕಾಳಜಿಗೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಪೂರಕವಾಗಿ ಸ್ಪಂದಿಸಿವೆ. ಇದನ್ನು ಮಾದರಿಯಾಗಿ ಬೇರೆ ಜಿಲ್ಲೆಗಳು ಅನುಸರಿಸಬೇಕಿದೆ ಎಂದರು.
ಜಿಲ್ಲೆಯ ವಿವಿಧ ಬ್ಯಾಂಕ್‍ಗಳಲ್ಲಿ ಬೇರೆ ಭಾಷೆಯ ಅಧಿಕಾರಿಗಳು ಇರುವುದರಿಂದ ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿರುವ ಕುರಿತು ದೂರುಗಳಿವೆ. ಬ್ಯಾಂಕ್ ಅಧಿಕಾರಿಗಳು ಜನರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಕನ್ನಡ ಭಾಷಾ ಅನುಷ್ಠಾನದ ತರಬೇತಿಯ ಅವಶ್ಯವಿದೆ. ಬ್ಯಾಂಕಿಂಗ್ ಪರೀಕ್ಷೆಗಳನ್ನು 22 ಭಾಷೆಗಳಲ್ಲೂ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಎಲ್ಲರಿಗೂ ಅವರವರ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗಬೇಕು. ಬ್ಯಾಂಕ್‍ಗಳಲ್ಲಿ ಶೇ.100 ರಷ್ಟು ಕನ್ನಡಿಗರು ಇರಲು ಕನ್ನಡಿಗರಿಗೆ ಬ್ಯಾಂಕ್‍ಗಳಲ್ಲಿ ಹೆಚ್ಚಿನ ಉದ್ಯೋಗ ಸಿಗಬೇಕು ಎಂದು ತಿಳಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಡಿ.ಬಿ.ಇ)ಗೆ ಜಮೀನು ನೀಡಿ ಸ್ಥಳೀಯ ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಶೇ.40 ರಷ್ಟು ಉದ್ಯೋಗ ಮೀಸಲಿಡುವಂತೆ ಸರ್ಕಾರದ ಸುತ್ತೋಲೆ ಹೊರಡಿಸಿದೆ. ಇದು ಉಲ್ಲಂಘನೆಯಾಗುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಜಿಲ್ಲಾಡಳಿತ ಜಿಲ್ಲಾ ವ್ಯಾಪ್ತಿಯ ಕೈಗಾರಿಕೆಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು. ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಲಭ್ಯತೆ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕಲ್ಪಿಸಿಕೊಡಲು ಪ್ರಾಧಿಕಾರ ಬದ್ಧವಾಗಿದೆ ಎಂದು ಅಧ್ಯಕ್ಷರು ಹೇಳಿದರು.
ರಾಜ್ಯದಲ್ಲಿ ಶತಮಾನ ಕಂಡ ಸರ್ಕರಿ ಕನ್ನಡ ಶಾಲೆಗಳನ್ನು ಪಾರಂಪರಿಕ ಶಾಲೆಗಳಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶತಮಾನ ಕಂಡಿರುವ ಶಾಲೆಗಳ ಪಟ್ಟಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ಪ್ರತಿ ಜಿಲ್ಲೆಗೊಂದರಂತೆ ಪಾರಂಪರಿಕ ಶಾಲೆ ಮಾಡಬೇಕು. ರಾಜ್ಯದಲ್ಲಿ 19,700 ಸರ್ಕಾರಿ ಶಾಲೆಗಳಿಗೆ ಆಸ್ತಿ ಖಾತಾ ನೊಂದಣಿ ಪತ್ರವೇ ಇಲ್ಲ. ಶಾಲೆ ಮುಚ್ಚಿದ ಬಳಿಕ ಶಾಲೆಗೆ ದಾನಕೊಟ್ಟವರ ಮೊಮ್ಮಕ್ಕಳು ಆ ಜಾಗವನ್ನು ಖಾಸಗಿಯವರು ಮಾರಾಟ ಮಾಡುತ್ತದ್ದಾರೆ. ಸರ್ಕಾರಿ ಶಾಲೆಗಳ ಜಾಗ ಸರ್ಕಾರದ ಹೆಸರಿನಲ್ಲಿಯೇ ಇರಬೇಕು. ಶಾಲೆ ಮುಚ್ಚಿದರೂ ಆ ಜಾಗ ಸರ್ಕಾರದ ಅಧೀನದಲ್ಲಿ ಇರಬೇಕು. ಜಿಲ್ಲೆಯಲ್ಲಿ 115 ಸರ್ಕಾರಿ ಶಾಲೆಗಳಿಗೆ ಖಾತಾ ಪತ್ರವಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಸೂಚನಾ ಫಲಕಗಳು ಇಂಗ್ಲೀಷ್ ಭಾಷೆಯಲ್ಲಿದ್ದು ಕಡ್ಡಾಯವಾಗಿ ಕನ್ನಡದಲ್ಲಿ ಫಲಕಗಳು ಇರಬೇಕು. ವ್ಯಾಪಾರಿಗಳ ಬಳಿ ವಸ್ತುಗಳನ್ನು ಗಿರಿವಿ ಇಡುವವರ ಪತ್ರಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕನ್ನಡದ ನಾಮಫಲಕ ಹಾಕಬೇಕು. ಮಲೆ ಮಹದೇಶ್ವರ ಬೆಟ್ಟದ ರಶೀದಿಗಳನ್ನು ಕನ್ನಡದಲ್ಲಿ ಮುದ್ರಿಸಬೇಕು. ವೈದ್ಯರು ಚೀಟಿ ಬರೆಯುವಾಗ ರೋಗಿಯ ಹೆಸರನ್ನಾದರೂ ಕನ್ನಡದಲ್ಲಿ ಬರೆಯಬೇಕು. ಕೆಪಿಎಸ್ ಶಾಲೆಗಳಲ್ಲಿ 5ನೇ ತರಗತಿ ತನಕ ಕನ್ನಡ ಮಾಧ್ಯಮ ಮಾಡಬೇಕು. ನಮ್ಮ ಮುಂದಿನ ತಲೆಮಾರಿಗೆ ಉತ್ತಮ ಕನ್ನಡ ಕಲಿಕೆ ವಿದಾನಗಳನ್ನು ನೀಡಬೇಕಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜು, ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಹಿರಿಯ ಸದಸ್ಯ ಡಾ. ಗುರುರಾಜು, ಆಪ್ತ ಕಾರ್ಯದರ್ಶಿ ಪಣಿಕುಮಾರ್, ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಅರುಣ್ ಕುಮಾರ್, ಪಿ. ಮಹೇಶ್, ರೂಬಿನ್ ಸಂಜಯ್, ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.