ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಗೌಡನ ಕೆರೆಗೆ ಮೀನು ಮರಿ ಬಿಡುವ ಮೂಲಕ ಮತ್ಸ್ಯ ಸಂಜೀವಿನಿ ಯೋಜನೆಗೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಅವರು ಇಂದು ಚಾಲನೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಚಂದ್ರಿಕಾ ಸ್ವ ಸಹಾಯ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಅವರು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವ್ಯಾಪ್ತಿಯಲ್ಲಿರುವ ಸ್ವ ಸಹಾಯ ಗುಂಪಿನ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಲು ಮತ್ಸ್ಯ ಸಂಜೀವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಮತ್ತು ಇಲಾಖೆಯ ಸಹಭಾಗಿತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲಾಖೆಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ, ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ರಾಜಣ್ಣ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಸ್ವ ಸಹಾಯ ಗುಂಪಿನ ಮಹಿಳೆಯರು ಇದೇ ಸಂದರ್ಭದಲ್ಲಿ ಇದ್ದರು.