ಜನಪರ ಅಭಿವೃದ್ಧಿ ಯೋಜನೆಗಳ ಹರಿಕಾರ ಡಿ. ದೇವರಾಜ ಅರಸು : ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಜನಪರ ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ ಡಿ. ದೇವರಾಜ ಅರಸು ಅವರು ರಾಜ್ಯದ ಅಭಿವೃದ್ಧಿಯ ಹರಿಕಾರರು ಆಗಿದ್ದಾರೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

  ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ, ದೀನ ದಲಿತರ ಧೀಮಂತ ನಾಯಕ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

  ಯಾವುದೇ ರಾಜಕಾರಣಿ ಇರಲಿ, ಅಧಿಕಾರಿಯಾಗಿರಲಿ ತಮ್ಮ ಅಧಿಕಾರ ಅವಧಿಯಲ್ಲಿ ಸ್ಮರಣೀಯ ಕೆಲಸ-ಕಾರ್ಯಗಳನ್ನು ಮಾಡಿದ್ದರೆ ಅದು ಡಿ. ದೇವರಾಜ ಅರಸು ಮಾತ್ರ ಆಗಿದ್ದಾರೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಅರಸು ಅವರು ಮೈಸೂರು ಸಂಸ್ಥಾನವನ್ನು ಕರ್ನಾಟಕವೆಂದು ಮರುನಾಮಕರಣದ ಐತಿಹಾಸಿಕ ನಿರ್ಧಾರ ತೆಗೆದುಕೊಂಡರು. ಪ್ರಧಾನಮಂತ್ರಿಗಳ 20 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ಅರಸು ಅವರಿಗೆ ಸಲ್ಲಬೇಕು ಎಂದು ಸಚಿವರು ತಿಳಿಸಿದರು.

  ಉಳುವವನೇ ಭೂಮಿ ಒಡೆಯ, ಜೀತಪದ್ದತಿಯಿಂದ ವಿಮುಕ್ತಿ ಸೇರಿದಂತೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಎಲ್.ಜಿ. ಹಾವನೂರ ಅವರ ವರದಿ ಅನುಷ್ಠಾನ ಇವೆಲ್ಲವೂ ಮಹತ್ವದ ಯೋಜನೆಗಳಾಗಿವೆ. ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಸೌಲಭ್ಯವಂಚಿತ ತಳ ಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯ ದೊರೆಯುವಂತೆ ಮಾಡಿದ ಮಹಾನ್ ಮುತ್ಸದ್ದಿ ದೇವರಾಜ ಅರಸು ನಮ್ಮೆಲ್ಲರಿಗೂ ಮಾದರಿ ನಾಯಕರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

  ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ಅಭಿವೃದ್ಧಿಪರ ಕಳಜಿ ಹಾಗೂ ದೃಷ್ಠಿಕೋನ ಹೊಂದಿದ್ದ ಅರಸು ತಮ್ಮ ಜೀವಿತಾವಧಿಯಲ್ಲಿ ಉತ್ತಮ ಆಡಳಿತ ನೀಡಿ ಕರ್ನಾಟಕದ ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. 1972ರಲ್ಲಿ ರಾಜ್ಯದ ಆಡಳಿತ ಆಡಳಿತದ ಚುಕ್ಕಾಣಿ ಹಿಡಿದ ಅವರು ಕೇವಲ 8 ವರ್ಷಗಳ ಕಡಿಮೆ ಅವಧಿಯಲ್ಲಿ ಬಡವರ ದೀನದಲಿತರ, ಶೋಷಿತರ ಪರ ದನಿಯೆತ್ತಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಿದರು. ಸಾಮಾಜಿಕ, ರಾಜಕೀಯ ಏಕತೆಗೆ ಕೊಡುಗೆ ನೀಡಿದರು. ಹಿಂದುಳಿದ ಅನೇಕರು ಇಂದು ಸ್ವಾವಲಂಬಿ ಜೀವನ ನಡೆಸಲು ಅರಸು ಕಾರಣರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿಯಾಗಿದ್ದಾರೆ. ಇಂದಿನ ಯುವಪೀಳಿಗೆ ದೇವರಾಜ ಅರಸು ಅವರ ಜೀವನ ಸಾಧನೆಗಳನ್ನು ಅರಿತು ಮುನ್ನೆಡೆಯಬೇಕು ಎಂದರು.

  ಶಾಸಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರು ಮಾತನಾಡಿ ದೇವರಾಜ ಅರಸುರವರನ್ನು ಈ ನಾಡಿನ ಜನತೆ ಇಂದು ನಾನಾ ಕಾರಣಗಳಿಗೆ ಸ್ಮರಿಸಬೇಕಾಗಿದೆ. ಸಮಾಜಮುಖಿಯಾಗಿ ಅರಸುರವರು ಎಲ್ಲಾ ವರ್ಗಗಳ ಜನರಿಗೂ ಶಿಕ್ಷಣ, ವಸತಿ ಸೇರಿದಂತೆ ಅನೇಕ ಮೂಲಸೌಲಭ್ಯ ದೊರಕುವಂತೆ ಮಾಡಿದವರು. ಅವರ ಸಿದ್ದಾಂತಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. 

  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು ಮತ್ತು ಮೈಸೂರು ವಿಶ್ವ ವಿದ್ಯಾನಿಲಯದ ಡಿ. ದೇವರಾಜ ಅರಸು ಪೀಠದ ಮಾಜಿ ಸಂದರ್ಶಕ ಪ್ರಾಧ್ಯಾಪಕರಾದ ಕೆ.ಎನ್. ಲಿಂಗಪ್ಪ ಅವರು ಪ್ರಧಾನ ಭಾಷಣ ಮಾಡಿ ಈ ನಾಡಿನ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ಕೊಟ್ಟ ಧೀಮಂತ ನಾಯಕ ದೇವರಾಜ ಅರಸು. ಈ ರಾಜ್ಯದಲ್ಲಿ ಬಂದು ಹೋಗಿರುವ ಸಾಕಷ್ಟು ಮುಖ್ಯಮಂತ್ರಿಗಳಲ್ಲಿ ವಿಶಿಷ್ಟ, ವಿಭಿನ್ನವಾಗಿ ಕಾಣುವ ಅಕರ್ಷಣೀಯ ವ್ಯಕ್ತಿತ್ವ ಆರಸು ಅವರದ್ದು. ಬಡವರ, ಶೋಷಿತರ ಏಳಿಗೆಗೆ ದುಡಿದ ಮಹಾತ್ಮ ದೇವರಾಜ ಅರಸು ಎಂದರೇ ತಪ್ಪಾಗಲಾರದು. ಅವರ ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

  ಇದೇ ವೇಳೆ ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಅರಸುರವರ ಜೀವನ ಸಾಧನೆ ಕುರಿತ ಸಾಮೂಹಿನ ನೃತ್ಯ ನಡೆಯಿತು.

  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನ), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಡಿ.ವೈ.ಎಸ್.ಪಿ ಸ್ನೇಹರಾಜ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಏರ್ಪಡಿಸಿದ್ದ ಡಿ. ದೇವರಾಜ ಅರಸುರವರ ಭಾವಚಿತ್ರದ ಮೆರವಣಿಗೆಗೆ  ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಸಿರು ನಿಶಾನೆ ತೋರಿದರು.

Leave a Reply

Your email address will not be published. Required fields are marked *