
ಮೈಸೂರು: ಸಮಾಜದಲ್ಲಿ ತೊನ್ನು ರೋಗಿಗಳ ಬಗ್ಗೆ ಇರುವ ತಾರತಮ್ಯ ನಿಲ್ಲಬೇಕು ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಅವರು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚರ್ಮರೋಗಶಾಸ್ತ್ರ ವಿಭಾಗ ಮತ್ತು ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ತೊನ್ನುರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವತೊನ್ನು ದಿನಾಚರಣೆಯು ಒಂದು ಜಾಗೃತಿ ಕಾರ್ಯಕ್ರಮವಾಗಿದ್ದು, ಚರ್ಮದ ಮೇಲಿನ ಬಿಳಿ ಮಚ್ಚೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಮತ್ತು ರೋಗಿಗಳಿಗೆ ಮಾನಸಿಕ ಬೆಂಬಲ ನೀಡಲು ಉದ್ದೇಶಿಸಲಾಗಿದೆ ಎಂದರು.
ತೊನ್ನು ಇತರರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ, ಇದು ಸೋಂಕು ಅಥವಾ ಕಳಪೆ ನೈರ್ಮಲ್ಯದಿಂದ ಬರುವುದಿಲ್ಲ, ಮೂಢನಂಬಿಕೆಗಳಿಗೆ ಆಸ್ಪದವಿಲ್ಲ ಇದು ಯಾವುದೇ ಶಾಪ, ಹಿಂದಿನ ಜನ್ಮದ ಕರ್ಮ ಅಥವಾ ಕೆಟ್ಟರಕ್ತದ ಪರಿಣಾಮ ಅಲ್ಲ, ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ತೊನ್ನುರೋಗಕ್ಕೆ ಫೋಟೋಥೆರಪಿ ಮತ್ತು ಕಸಿ ಚಿಕಿತ್ಸೆಗಳು ಲಭ್ಯವಿದ್ದು, ಚರ್ಮದ ಮೂಲ ಬಣ್ಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೀರಣ್ಣರವರು ಮಾತನಾಡಿ, ತೊನ್ನು ಎಂಬುದು ಚರ್ಮದ ಬಣ್ಣವನ್ನು ಉತ್ಪಾದಿಸುವ ಮೆಲನೊಸೈಟ್ ಕೋಶಗಳು ನಾಶವಾಗುವ ಒಂದು ಸ್ವಯಂ ನಿರೋಧಕ ಸ್ಥಿತಿಯಾಗಿದೆ. ಇದರಿಂದಾಗಿ ಚರ್ಮದ ಮೇಲೆ ಬಿಳಿ ಮಚ್ಚೆಗಳು ಉಂಟಾಗುತ್ತವೆ. ಇದು ಸಾಂಕ್ರಾಮಿಕವಲ್ಲ ಮತ್ತು ಜೀವಕ್ಕೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ, ಇತ್ತೀಚೆಗೆ ತೊನ್ನು ಕಾಯಿಲೆಗೆ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿದ್ದು, ಫೋಟೋಥೆರಪಿ, ಲೇಸರ್ ಚಿಕಿತ್ಸೆ ಮುಂತಾದ ಚಿಕಿತ್ಸೆಗಳು ಲಭ್ಯವಿದ್ದು ರೋಗಿಗಳು ಆತಂಕ ಪಡದೆ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದು ಉತ್ತಮ ಫಲಿತಾಂಶ ಪಡೆಯಬಹುದು ಎಂದರು.
ಚರ್ಮರೋಗಶಾಸ್ತ್ರ ವಿಭಾಗದ ಡಾ.ವಿನುತರಂಗಪ್ಪ ಮತ್ತು ಮಾನಸಿಕ ಆರೋಗ್ಯ ವಿಭಾಗದ ಡಾ.ಅಕ್ಷತಾರವರು ಮಾತನಾಡಿ, ತೊನ್ನು ರೋಗವು ದೈಹಿಕ ನೋವನ್ನು ಉಂಟುಮಾಡದಿದ್ದರೂ, ಸಮಾಜದಲ್ಲಿನ ಕಳಂಕ ಮತ್ತು ಬದಲಾಗುವ ದೇಹದ ಆಕೃತಿಯಿಂದಾಗಿ ತೀವ್ರವಾದ ಖಿನ್ನತೆ, ಆತಂಕ, ಕಳಪೆ ಸ್ವಾಭಿಮಾನ ಮತ್ತು ಸಾಮಾಜಿಕ ಹಿಂಜರಿಕೆಗೆ ಕಾರಣವಾಗಬಹುದು. ಇದಕ್ಕೆ ಭಯಪಡದೆ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಪಡೆದು ಸಾಮಾನ್ಯರಂತೆ ಜೀವನ ನಡೆಸಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತೊನ್ನು ರೋಗಿಗಳಿಗೆ ಉಚಿತ ಫೋಟೋಥೆರಪಿ (Phoಣoಣheಡಿಚಿಠಿಥಿ)ಚಿಕಿತ್ಸಾ ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆ ಅಭಿಯಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಈ ಶಿಬಿರಕ್ಕೆ ಸುಮಾರು ೭೦ ರೋಗಿಗಳು ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.