ಚಾಮರಾಜನಗರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2026ರನ್ನು ಪರಿಣಾಮಕಾರಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಮೇ.14) ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ ಅನುಷ್ಠಾನ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು 2026ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೊಸದಾಗಿ ಘನತ್ಯಾಜ್ಯ ನಿರ್ವಹಣೆ ನಿಯಮ 2026 ಅನ್ನು ಜಾರಿಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಸಿವಿಲ್ ಆಫೀಲ್ ಸಂಖ್ಯೆ: 6174/2023 ರ ಪ್ರಕರಣದಲ್ಲಿ 2026ರ ಫೆಬ್ರವರಿ 19ರಂದು ನೀಡಿರುವ ಆದೇಶದನ್ವಯ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಸಮಿತಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷ ಸೆಲ್ ಅನ್ನು ರಚಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂಲದಲ್ಲಿಯೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಾಲ್ಕು ವಿಭಾಗಗಳಲ್ಲಿ ಅಂದರೆ ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ (ಕೀಟನಾಶಕ, ಕ್ಯಾನ್, ಅಥವಾ ಪೇಯಿಂಟ್ ಡ್ರಮ್, ಸಿರಿಂಜುಗಳು, ಅವಧಿ ಮೀರಿದ ಔಷಧಿಗಳು ಬಲ್ಬುಗಳು) ವಿಂಗಡಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರನ್ನು (20 ಸಾವಿರ ಚ.ಮೀ. ನಿರ್ಮಿತ ಪ್ರದೇಶ, ಪ್ರತಿದಿನ 40 ಸಾವಿರ ಲೀ. ನೀರು ಬಳಕೆ ಮಾಡುವವರು, ಪ್ರತಿ ದಿನ 100 ಕೆ.ಜಿ. ಮೇಲ್ಪಟ್ಟು ತ್ಯಾಜ್ಯ ಉತ್ಪಾದನೆ ಮಾಡುವವರು ಬೃಹತ್ ತ್ಯಾಜ್ಯ ಉತ್ಪಾದಕರು) ಗುರುತಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಕಸ ಸುರಿಯುವ ಸ್ಥಳಗಳನ್ನು ಗುರುತಿಸಿ, ದಂಡ ವಿಧಿಸುವ ಕ್ರಮಗಳು ಮತ್ತು ಸುಧಾರಿತ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಗಳ ಮೂಲಕ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ನಗರ ಸ್ಥಳೀಯ ವಾರ್ಡ್ ಗಳಲ್ಲಿ ಆರ್.ಆರ್.ಆರ್ (ಕಡಿಮೆ ಮಾಡುವ, ಮರುಬಳಕೆ, ಪುನರ್‍ಬಳಕೆ) ಕೇಂದ್ರಗಳನ್ನು ಸ್ಥಾಪಿಸಿ ನಾಗರಿಕರು ಬಳಸಿದ ವಸ್ತುಗಳು, ಎಲೆಕ್ಟ್ರಾನಿಕ್ಸ್, ಉತ್ಪನ್ನ, ಬಟ್ಟೆ, ಪುಸ್ತಕಗಳು ಮುಂತಾದವನ್ನು ಮರುಬಳಕೆ, ಮರು ಸಂಸ್ಕರಣೆಗಾಗಿ ಬಳಸಲು ಅನುಕೂಲ ಮಾಡಿಕೊಡಬೇಕು. ಮೂಲದಲ್ಲಿಯೇ ಕಸ ವಿಂಗಡಣೆ, ಜಿ.ವಿ.ಪಿ (ಹೆಚ್ಚು ಕಸ ಸುರಿಯುವ) ಸ್ಥಳಗಳನ್ನು ಗುರುತಿಸಿ ಜನಜಾಗೃತಿ ಮೂಡಿಸಬೇಕು. ಮರು ಬಳಕೆದಾರರನ್ನು ಗುರುತಿಸಿ ತ್ಯಾಜ್ಯ ಸಂಬಂಧ ವೃತ್ತಾಕಾರದ ಆರ್ಥಿಕತೆಯ ಮೂಲ ತತ್ವಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಬಿ.ವಿ. ವೆಂಕಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ತಮ್ಮಣ್ಣ ಗೌಡ ಪಾಟಿಲ್, ನಗರಸಭೆ ಆಯುಕ್ತರಾದ ಪರಶುರಾಮ ಛಲವಾದಿ, ಕೊಳ್ಳೇಗಾಲ ನಗರಸಭೆ ಆಯುಕ್ತರಾದ ರುದ್ರಮ್ಮ ಶರಣಯ್ಯ, ಪರಿಸರ ಎಂಜಿನಿಯರ್ ರೂಪಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related