
ಚಾಮರಾಜನಗರ: ಜನಗಣತಿ-2026ರ ಅಂಗವಾಗಿ ಮೊದಲ ಹಂತದಲ್ಲಿ ಮನೆಪಟ್ಟಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ನಗರದಲ್ಲಿಂದು ಸನ್ಮಾನಿಸಿದರು.
ನಗರದ ಸಿ.ಡಿ.ಎಸ್. ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಪಟ್ಟಿ ಕಾರ್ಯಕ್ಕೆ ನಗರ, ಸ್ಥಳೀಯ ಸಂಸ್ಥೆ ಹಾಗೂ ಕಂದಾಯ ಇಲಾಖೆಯಿಂದ ನಿಯೋಜಿಸಿದ್ದ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಜಿಲ್ಲಾಧಿಕಾರಿಯವರು ಶಾಲು ಹೊದಿಸಿ, ಹಾರ ತುರಾಯಿ, ಫಲತಾಂಬೂಲಗಳೊಂದಿಗೆ ಆತ್ಮೀಯವಾಗಿ ಗೌರವಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು 2026ರ ಜನಗಣತಿಯ ಮೊದಲ ಹಂತದ ಮನೆಪಟ್ಟಿ ಕಾರ್ಯವನ್ನು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ಣಗೊಳಿಸಲಾಗಿದೆ. ನಿಗದಿತ ಅವಧಿಗಿಂತ 15 ದಿನಗಳ ಮೊದಲೇ ಮನೆಪಟ್ಟಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ಆಯಾ ತಾಲೂಕುಗಳಲ್ಲಿಯೇ ಗೌರವಿಸಲಾಗುತ್ತಿದೆ. 2027ರ ಫೆಬ್ರವರಿಯಲ್ಲಿ ಆರಂಭವಾಗುವ ಜನಗಣತಿ 2ನೇ ಹಂತದಲ್ಲಿಯೂ ಇದೇ ಮಾದರಿಯ ಕಾರ್ಯನಿರ್ವಹಣೆಗೆ ಗಣತಿದಾರರನ್ನು ಹುರಿದುಂಬಿಸಲಾಗುತ್ತಿದೆ ಎಂದರು.
ಜನಗಣತಿ ಆರಂಭದ ದಿನಗಳಲ್ಲಿ ಮನೆಪಟ್ಟಿ ಕಾರ್ಯದಲ್ಲಿ ಚಾಮರಾಜನಗರ ಜಿಲ್ಲೆ 30ನೇ ಸ್ಥಾನದಲ್ಲಿತ್ತು. ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಜನಗಣತಿ ಪರಿಣಾಮಕಾರಿ ಕಾರ್ಯನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಪ್ರಸ್ತುತ ಜನಗಣತಿಯ ಮನೆಪಟ್ಟಿ ಕಾರ್ಯನಿರ್ವಹಣೆಯಲ್ಲಿ ನಮ್ಮ ಚಾಮರಾಜನಗರ ಜಿಲ್ಲೆ ಎಂಟನೇ ಸ್ಥಾನ ಪಡೆದಿದೆ. ಇದಕ್ಕಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಗಣತಿದಾರರನ್ನು ಜಿಲ್ಲಾಧಿಕಾರಿಯವರು ಅಭಿನಂದಿಸಿದರು.
ನಗರ, ಸ್ಥಳಿಯ ಸಂಸ್ಥೆಗಳಿಂದ ನಿಯೋಜಿತರಾಗಿದ್ದ ಮೇಲ್ವಿಚಾರಕರಾದ ಎನ್. ಸೋಮಶೇಖರ್, ತ್ರಿವೇಣಿ, ಎಂ. ನಂಜುಂಡಸ್ವಾಮಿ, ಗಣತಿದಾರರಾದ ಡಿ.ವಿ. ರಂಗಪ್ಪ, ಶ್ರೀಶೈಲ, ಅಮಿತ ಭಾನು, ರೇಣುಕಾ, ಎಂ. ಕುಮಾರ, ಶಿವಣ್ಣ, ನಟರಾಜು, ಕಿಶೋರ್ ಹಾಗೂ ಕಂದಾಯ ಇಲಾಖೆಯ ಎಂ. ರಾಜೇಂದ್ರ, ಪಿ.ವಿ. ಲಕ್ಷ್ಮೀ, ಎಚ್.ಎಂ. ಮಂಜುನಾಥ್, ಸಿದ್ದಲಿಂಗಮೂರ್ತಿ, ಆರ್. ವಿನೋದ್, ಸಿ. ಶ್ರೀಲಕ್ಷ್ಮೀ ಅವರನ್ನು ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಸನ್ಮಾನಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ತಹಶೀಲ್ದಾರ್ ಗಿರಿಜಾ, ನಗರಸಭೆಯ ಸಮುದಾಯ ಸಂಘಟನಾಧಿಕಾರಿ ವೆಂಕಟ್‍ನಾಯಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.