ಚಾಮರಾಜನಗರ :ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಆಗಬೇಕು, ಗೆಲ್ಲಬೇಕು ಎಂದರೆ ಎಸ್‌ಸಿ ಮೋರ್ಚಾ ಪ್ರಬಲ ಆಗಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ನಗರದ ಜಿಲ್ಲಾ ಬಿಜೆಪ ಕಚೇರಿಯಲ್ಲಿ ನಡೆದ ಜಿಲ್ಲಾ ಎಸ್‌ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಬೂತ್ ಮಟ್ಟಕ್ಕೂ ಸಂಘಟನಾ ಜಾಲ ವಿಸ್ತಾರ ಆಗಬೇಕಿದೆ ಎಂದರು.
ಜಿಲ್ಲೆಯ ಜನಸಂಖ್ಯೆ 10,20,791 ಇದ್ದು, ಇದರಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ 2.59 ಲಕ್ಷ, ಪರಿಶಿಷ್ಟ ಪಂಗಡ 1. 20 ಲಕ್ಷ ಇದ್ದು ಎರಡು ಸಮುದಾಯಗಳು ಸೇರಿದರೆ 3.79 ಲಕ್ಷದ ಜನಸಂಖ್ಯೆ ಇದೆ, ಶೇ. 37 % ಜನಸಂಖ್ಯೆ ಇದ್ದೇವೆ. ಇವರನ್ನು ಸಂಘಟಿಸಿ ಬಿಜೆಪಿ ಪಕ್ಷದ ಸಾಧನೆಗಳು, ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ತಿಳಿಸಬೇಕು. 2002ರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರ್ಕಾರ ಇದ್ದಾಗ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಹೈಕೋರ್ಟ್ ಸೂಚನೆಯ ಮೇಲೆ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ ಎಸ್‌ಸಿಗಿದ್ದ ಶೇ. 15 % ರಷ್ಟು ಮೀಸಲಾತಿಯನ್ನು ಶೇ. 17 % ಕ್ಕೆ ಏರಿಕೆ ಮಾಡಿದರು. ಎಸ್‌ಟಿ ಗಿದ್ದ ಶೇ. 3 % ಮೀಸಲಾತಿಯನ್ನು ಶೇ. 1 ಕ್ಕೆ ಹೆಚ್ಚಳ ಮಾಡಿದರು ಇದನ್ನು ಎಸ್‌ಸಿ ಮೋರ್ಚಾದ ಪದಾಧಿಕಾರಿ ಕಾರ್ಯಕರ್ತರಿಗೆ ತಲುಪಿಸಬೇಕು ಎಂದರು.
ಜಿಲ್ಲೆಯಲ್ಲಿ 983 ಬೂತ್ ಇದೆ. ಇದರಲ್ಲಿ ಎಸ್‌ಸಿ, ಎಸ್‌ಟಿ ಮತದಾರರು ಎಲ್ಲ ಕಡೆ ಇದ್ದಾರೆ. ಇದು ನಮ್ಮ ಶಕ್ತಿ ಇದು ಎಸ್‌ಸಿ, ಎಸ್‌ಟಿ ಮೋರ್ಚಾದವರಿಗೆ ಗೊತ್ತಾಗಲಿಲ್ಲ ಎಂದರೆ ಅದನ್ನು ಸಮುದಾಯಕ್ಕೆ ತಿಳಿಸೋರು ಯಾರು. ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ಕೊಡುವಂತೆ ಸೂಚನೆ ಇದೆ. ಅ ಪ್ರಕಾರ ಬಸವರಾಜಬೊಮ್ಮಾಯಿ ಹೆಚ್ಚು ಮಾಡಿ ಕೊಟ್ಟಿದ್ದರು. ಈಗ ಕಾಂಗ್ರೆಸ್ ಬಂದು ಎಸ್‌ಸಿ ಸಮುದಾಯಕ್ಕೆ ಇದ್ದ ಶೇ. 17 ರಷ್ಕರಲ್ಲಿ 15ಕ್ಕೆ ಇಳಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಇದ್ದ ಶೇ 7 ರಷ್ಟು ಮೀಸಲಾತಿಯಲ್ಲಿ ಶೇ. 3ಕ್ಕೆ. ಇಳಿಸಿ ಹೈಕೋರ್ಟ್ ಸೂಚನೆ ಮೇಲೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಲು ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ ಇದರಿಂದ ಸಮುದಾಯ ತುಂಭಾ ಅನ್ಯಾಯ ಉಂಟಾಗಿದ್ದು ಇದರಿಂದ ಎರಡು ಸಮುದಾಯಗಳು ತುಂಬಾ ಹುದ್ದೆಗಳನ್ನು ಕಳೆದುಕೊಳ್ಳುತ್ತಿದೆ ರಾಜ್ಯ ಸರ್ಕಾರದಲ್ಲಿ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಎರಡು ಸಮುದಾಯಗಳಿಗೂ 5 ಸಾವಿರ ಹುದ್ದೆಗಳು ಕಡಿಮೆ ಆಗುತ್ತದೆ ಎಂದರು.
ಕಾಂಗ್ರೆಸ್ ನಿಂದ ಪರಿಶಿಷ್ಟರಿಗೆ ಮೊದಲಿನಿಂದಲೂ ಅನ್ಯಾಯ : ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ದೇಶದಲ್ಲಿ ಕಳೆದ 13 ವರ್ಷಗಳಿಂದಲ್ಲೂ ಸುಧೀರ್ಘವಾಗಿ ಅಧಿಕಾರ ನಡೆಸಿಕೊಂಡು ಬಂದಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಅನೇಕ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಅದನ್ನು ಜನತೆಗೆ ತಿಳಿಸಬೇಕು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೊದಲಿನಿಂದಲ್ಲೂ ಅನ್ಯಾಯ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನವೀನ್ ಮೌರ್ಯ ಮಾತನಾಡಿ, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಮಂಡಳಿಗಳಿಗೂ ಭೇಟಿ ನೀಡಿ ಎಲ್ಲ ಬೂತ್‌ಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಮಾಡಲಾಗುವುದು ಪಕ್ಷದ ಹಿರಿಯರ ಸಲಹೆ- ಸೂಚನೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಲು ಶ್ರಮಿಸಲಾಗುವುದು ಎಂದರು.
ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರಕಾರಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಎಸ್‌ಸಿ ಪ್ರಭಾರಿ ಮೂಡಹಳ್ಳಿ ಮೂರ್ತಿ, ಅಮಚವಾಡಿ ಚಂದ್ರಶೇಖರ್, ರಾಜ್ಯ ಕಾರಕಾರಣಿ ಸಮಿತಿ ಸದಸ್ಯ ಕೆರೆಹಳ್ಳಿ ಮಹದೇವಸ್ವಾಮಿ, ಮುಖಂಡ ಕೋಡಿಉಗನೆ ಮಂಜ ಮಾತನಾಡಿದರು.
ಸಭೆಯಲ್ಲಿ ಎಸ್ ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಸಮುದ್ರ ಶಿವಣ್ಣ, ಪರಮೇಶ್ ಇತರರು ಭಾಗವಹಿಸಿದ್ದರು.
