ಚಾಮರಾಜನಗರ: ಕುಡಿಯುವ ನೀರು ಸಮಸ್ಯೆ ಎದುರಿಸುತ್ತಿರುವ ಹನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ಭೇಟಿ ನೀಡಿ ಅಹವಾಲು ಆಲಿಸಿದರು.
ಕೆಂಚಯ್ಯನದೊಡ್ಡಿ, ಎಂ.ಜಿ.ದೊಡ್ಡಿ, ಕುರಟ್ಟಿಹೊಸೂರು ಭಾಗದ ಗ್ರಾಮಗಳು, ಹೊಸದೊಡ್ಡಿ, ಕೆಂಪಯ್ಯನಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯ ಖುದ್ದು ಪರಿಶೀಲನೆ ನಡೆಸಿದರು.
ಗ್ರಾಮದ ಜನರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗ್ರಾಮಸ್ಥರು ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಈಗ ಕೊಳವೆಬಾವಿ ಕೊರೆಯಿಸಿದರೆ ನೀರು ಬರುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ನೂತನ ತಂತ್ರಜ್ಞಾನ ಬಳಸಿ ಬೋರ್ ವೆಲ್ ಗಳನ್ನು ಕೊರೆಯಿಸಬೇಕು. ಇನ್ನಷ್ಟು ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು. ಕುಡಿಯುವ ನೀರಿಗೆ ಹೆಚ್ಚಿನ ಅನಾನುಕೂಲ ಈ ಸಂದರ್ಭದಲ್ಲಿ ಆಗಿದೆ. ಜಾನುವಾರುಗಳಿಗೆ ಸಹ ನೀರು ಪೂರೈಸಬೇಕಿದೆ ಎಂದು ಜನರು ತಮ್ಮ ಅಳಲು ತೋಡಿಕೊಂಡರು.
ಕೌದಳ್ಳಿ ಭಾಗದಲ್ಲಿ ಅರಣ್ಯ ಇಲಾಖೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ ತಕರಾರು ಮಾಡುತ್ತಿದೆ ಎಂದು ಗ್ರಾಮಸ್ಥರು ಗಮನಕ್ಕೆ ತಂದರು. ಸ್ಥಳದಲ್ಲಿಯೇ ದೂರವಾಣಿ ಮೂಲಕ ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರು ಸಮಸ್ಯೆ ಪರಿಹರಿಸುವುದು ಮೊದಲ ಆದ್ಯತೆಯಾಗಿದೆ. ಬೇಸಿಗೆಯಂತಹ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಯಾವುದೇ ಅಡಚಣೆ ಮಾಡಬಾರದು. ಕೂಡಲೇ ಪೈಪ್ ಲೈನ್ ಕಾಮಗಾರಿಗೆ ಅನುವು ಮಾಡುವಂತೆ ಸೂಚಿಸಿದರು.
ಕೆಲ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದರೂ ಸಹ ಮೋಟಾರ್, ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮೋಟಾರ್, ವಿದ್ಯುತ್ ಸಂಪರ್ಕ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಯಾವುದೇ ಇನ್ನಿತರ ಕೆಲಸಗಳಿದ್ದರೂ ಬದಿಗೊತ್ತಿ ಜನರ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಟ್ಯಾಂಕರ್‍ಗಳಿಂದ ಪೂರೈಸಲಾಗುತ್ತಿರುವ ನೀರು ಎಲ್ಲಿ ಸಾಕಾಗುತ್ತಿಲ್ಲವೋ ಅಂತಹ ಕಡೆ ಹೆಚ್ಚು ಪ್ರಮಾಣದಲ್ಲಿ ನೀರು ಪೂರೈಸಿ ಎಂದು ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನಿಡಿದರು. ಮನೆ ಬಳಕೆ ಹಾಗೂ ಕುಡಿಯಲು ಯಾವುದೇ ಕೊರತೆಯಾಗದಂತೆ ಪರ್ಯಾಯ ಮಾರ್ಗಗಳ ಮೂಲಕ ನೀರು ಸರಬರಾಜು ಮಾಡಬೇಕೆಂದು ಸಚಿವರು ಸೂಚನೆ ನೀಡಿದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತಾಗಿ ಸಮರ್ಪಕವಾಗಿ ನೀರು ಒದಗಿಸಬೇಕಿದೆ. ಮಳೆ ಇಲ್ಲದ ಕಾರಣ ನೀರಿನ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಜನರ ಅವಶ್ಯಕತೆಗೆ ಅನುಗುಣವಾಗಿ ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಸಲು ಹೆಚ್ಚಿನ ಗಮನಹರಿಸಬೇಕು ಎಂದರು.
ಸಚಿವರ ಭೇಟಿಯ ವೇಳೆ ಎಂಜಿ ದೊಡ್ಡಿ ಗ್ರಾಮದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿಕೊಡಬೇಕು. ಗ್ರಾಮಕ್ಕೆ ಹತ್ತಿರವಾಗುವಂತೆ ಬಸ್ ನಿಲುಗಡೆ ಮಾಡಬೇಕು. ಬೀದಿ ದೀಪದ ವ್ಯವಸ್ಥೆಯು ಆಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಕುರಟ್ಟಿಹೊಸೂರಿನಲ್ಲಿ ಅರಣ್ಯ ಕಾಯ್ದೆಯಡಿ ಮಂಜೂರಾಗಿರುವ ಭೂಮಿಗೆ ಸೂಕ್ತ ದಾಖಲೆಗಳು ಇಲ್ಲವಾಗಿದ್ದು, ಇದನ್ನು ಒದಗಿಸಲು ಕೊಡಲು ಮನವಿ ಮಾಡಿದರು. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಸಚಿವರಿಗೆ ಕೋರಿದರು.
ಕೆಂಪಯ್ಯನಹಟ್ಟಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದನ್ನು ತಡೆಯುವಂತೆ ಸ್ಥಳೀಯರು ಮನವಿ ಮಾಡಿದರು. ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಗ್ರಾಮದಲಲಿ ಸಣ್ಣ ಪುಟ್ಟ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆ ಶಾಲಾ ಕಾಲೇಜಿಗೆ ಹೋಗಿ ಬರಲು ಬಸ್ ನಿಲುಗಡೆ ಮಾಡಬೇಕು. ಈ ಭಾಗದಲ್ಲೇ ಪದವಿ ಪೂರ್ವ ಕಾಲೇಜು ಆರಂಭಿಸುವಂತೆ ಸ್ಥಳೀಯರು ಅಹವಾಲು ಸಲ್ಲಿಸಿದರು. ಜನರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕೂಡಲೇ ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ನಿಲುಗಡೆಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು. ಸ್ಥಳದಲ್ಲಿಯೇ ಇದ್ದ ಅಬಕಾರಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡೆಯಲು ನಿರ್ದಾಕ್ಷಿಣ್ಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮ್ಯಾನ್ಯುವೆಲ್ ಸಂತೋಷ್, ತಹಶೀಲ್ದಾರ್ ಚೈತ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Related