ಆರೋಗ್ಯಯುತ ದೇಶ ಕಟ್ಟಲು ಪ್ರತಿಯೊಬ್ಬರು ಆರೋಗ್ಯವಂತರಾಗಿ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ

ಚಾಮರಾಜನಗರ: ಆರೋಗ್ಯಯುತ ದೇಶ ಕಟ್ಟಲು ಸ್ವಚ್ಚ ಪರಿಸರ ಕಾಪಾಡಿಕೊಂಡು ಪೌಷ್ಠಿಕ ಆಹಾರ ಸೇವಿಸುವ ಮೂಲಕ ಪ್ರತಿಯೊಬ್ಬರು ಆರೋಗ್ಯವಂತರಾಗುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ಸಲಹೆ ಮಾಡಿದರು.

   ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು-ನೆರವು ಮತ್ತು ಆರೋಗ್ಯ-ನೈರ್ಮಲ್ಯ ಜಾಗೃತಿ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತಾಲ್ಲೂಕು ಮಟ್ಟದ ಜಾಗೃತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಸ್ವಚ್ಚ ಗಾಳಿ, ಬೆಳಕು ಸೇರಿದಂತೆ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸಬೇಕಾಗಿರುವುದರಿಂದ ನೀರನ್ನು ಮಿತವಾಗಿ ಬಳಸಬೇಕು. ಶುದ್ಧ ಗಾಳಿಗಾಗಿ ಗಿಡಮರಗಳನ್ನು ಯತೇಚ್ಛವಾಗಿ ಬೆಳೆಸಬೇಕು. ರಕ್ತಹೀನತೆ ತಡೆಗಟ್ಟಲು ಪೌಷ್ಠಿಕಾಂಶವುಳ್ಳ ತರಕಾರಿ, ಸೊಪ್ಪು, ಮೊಳಕೆಕಾಳು ಸೇವನೆ ಮಾಡಬೇಕು. ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದಿಂದ ಸಿಗುವ ಪೌಷ್ಠಿಕ ಆಹಾರದ ಕಿಟ್ ಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಅನೀಮಿಯ ಮುಕ್ತ ದೇಶ ಕಟ್ಟಲು ನೆರವಾಗುವ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸ್ಥಳೀಯ ಗ್ರಾಮಪಂಚಾಯಿತಿ ಪಿ.ಡಿ.ಇ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮುಂದಾಗುವಂತೆ ತಿಳಿಸಿದರು.

   ದೇಶದ ಪ್ರತಿಯೊಬ್ಬ ಪ್ರಜೆಯು ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಪಡೆದು ಈ ದೇಶದ ಕಾನೂನನ್ನು ಪಾಲಿಸಿ ಗೌರವಿಸಬೇಕು. ಅಸ್ಪøಶ್ಯತೆ ಆಚರಣೆ ಹಾಗೂ ದೌರ್ಜನ್ಯ ಮಾಡಬಾರದು. ಈ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿರುವುದಿಲ್ಲ. ಬಾಲ್ಯವಿವಾಹ ಹಾಗೂ ಫೋಕ್ಸೋ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಲು ಗ್ರಾಮೀಣ ಭಾಗದಲ್ಲಿ ಮಕ್ಕಳ ಪೋಷಕರಿಗೆ ಸತತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶದ ಕುರಿತು ಹೆಣ್ಣುಮಕ್ಕಳಿಗೆ ತಿಳಿಸಿಕೊಡಬೇಕು. ಒಟ್ಟಾರೆ ಮಕ್ಕಳಿಗೆ ದೇಶದ ಸತ್ಪ್ರಜೆಯಾಗಲು ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡುವಂತೆ ನ್ಯಾಯಾಧೀಶರಾದ ಈಶ್ವರ ಅವರು ಸಲಹೆ ಮಾಡಿದರು.

   ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಮಂಜುಳ ಅವರು ಮಾತನಾಡಿ ಬಾಲ್ಯವಿವಾಹ, ಫೋಕ್ಸೋ ಪ್ರಕರಣಗಳ ತಡೆಯಲು ತಡೆಯಲು ರಚಿಸಲಾಗಿರುವ ಸ್ಥಳೀಯ ಗ್ರಾಮಮಟ್ಟದ ಕಾವಲು ಪಡೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದರು.

   ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ-1955 ಮತ್ತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು (ದೌರ್ಜನ್ಯ ತಡೆ) ಅಧಿನಿಯಮ-1989ರ ಕುರಿತು ಕಾರ್ಯಕ್ರಮದಲ್ಲಿ ಸವಿವರವಾಗಿ ಮಾತನಾಡಿದರು.

   ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಗಿರಿಧರ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆರ್.ಡಿ.ಇ.ಪಿ.ಆರ್ ತರಬೇತುದಾರರಾದ ಕಾಳಿಂಗಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ಸಿದ್ದಶೆಟ್ಟಿ, ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಸಿದ್ದರಾಜು, ಗುಂಡ್ಲುಪೇಟೆಯ ನಿಸರ್ಗ ಟ್ರಸ್ಟ್ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಾರ್ಯದರ್ಶಿ, ಕರವಸೂಲಿಗಾರರು, ವಾಟರ್‍ಮನ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಎನ್.ಆರ್.ಎಲ್.ಎಂ ಸಿಬ್ಬಂದಿ, ಸಮುದಾಯ ಆರೋಗ್ಯಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *