- ಕುಡಿಯುವ ನೀರಿನ ಸಂಬಂಧ ಸಾರ್ವಜನಿಕರಿಂದ ಅಹವಾಲುಗಳು ಆಲಿಕೆ
ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಕುಡಿಯುವ ನೀರಿನ ಸಂಬಂಧ ಚಾಮರಾಜನಗರ ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಇಂದು ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಿದರು.
ಇಂದು ಬೆಳಿಗ್ಗೆಯೇ ಚಾಮರಾಜನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಹಾಗೂ ಅಧಿಕಾರಿಗಳೊಂದಿಗೆ ಪಟ್ಟಣದ 1ನೇ ವಾರ್ಡಿನ ಸೋಮವಾರಪೇಟೆ ಹಾಗೂ 2ನೇ ವಾರ್ಡಿನ ಗಾಳೀಪುರ ಬಡಾವಣೆಗಳಿಗೆ ಭೇಟಿಕೊಟ್ಟು ಕುಡಿಯುವ ನೀರಿನ ಪೂರೈಕೆ ಕುರಿತು ಜನರ ಕುಂದುಕೊರತೆಗಳನ್ನು ಆಲಿಸಿದರು.
ಮೊದಲಿಗೆ ಒಂದನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಹೊರಭಾಗದಲ್ಲಿರುವ ಹಂದಿಜೋಗಿ ಕಾಲೋನಿಗೆ ಸಚಿವರು ಭೇಟಿ ನೀಡಿದರು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ಸಚಿವರು ಅಲ್ಲಿನ ನಿವಾಸಿಗಳನ್ನು ವಿಚಾರಿಸಿದರು.
ಕುಡಿಯುವ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ. ನಗರಸಭೆಯಿಂದ ಟ್ಯಾಂಕರ್ ಮೂಲಕ ಆಗಾಗ್ಗೆ ನೀರು ಕೊಡುತ್ತಿದ್ದಾರೆ. ಅದು ಸಾಕಾಗುತ್ತಿಲ್ಲ, ಅಲ್ಲದೆ ಖಾಸಗಿಯವರು ನಾವು ವಾಸಿಸುತ್ತಿರುವ ಜಾಗವನ್ನು ತೆರವುಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕಾಗಿದೆ, ನಮಗೆ ಮನೆಗಳ ಅವಶ್ಯವಿದೆ ಎಂದು ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಜನರಿಗೆ ಆದ್ಯತೆ ಮೇರೆಗೆ ಕುಡಿಯುವ ನೀರು ಒದಗಿಸಬೇಕು. ಕೂಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.
ಇದೇ ವೇಳೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಂದಿಜೋಗಿ ಸಮುದಾಯದ ಜನರಿಗೆ ಮನೆಗಳನ್ನು ನೀಡಲು ಉತ್ತುವಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ. ಇಲ್ಲಿನ ನಿವಾಸಿಗಳನ್ನು ಸದ್ಯದಲ್ಲಿಯೇ ನಿಗದಿತ ಜಾಗಕ್ಕೆ ಸ್ಥಳಾಂತರ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಸಚಿವರಿಗೆ ತಿಳಿಸಿದರು.
ಬಳಿಕ ಸೋಮವಾರಪೇಟೆ ಹಾಗೂ ಗಾಳೀಪುರ ಬಡಾವಣೆಗೆ ಆಗಮಿಸಿದ ಉಸ್ತುವಾರಿ ಸಚಿವರು ಅಲ್ಲಿಯೂ ಕುಡಿಯುವ ನೀರು ಸಮಸ್ಯೆ ಕುರಿತು ಜನರೊಂದಿಗೆ ಮಾತನಾಡಿ ಅಹವಾಲುಗಳನ್ನು ಆಲಿಸಿದರು. ಕುಡಿಯುವ ನೀರು ಮೂರು ದಿನಗಳಿಗೊಮ್ಮೆ ಸರಬರಾಜು ಆಗುತ್ತಿದೆ. ಹೆಚ್ಚುವರಿ ಬೋರ್‍ವೆಲ್ ಕೊರೆಸಬೇಕು, ಕಸ ಸಂಗ್ರಹಣೆ ವಾಹನ ವಾರಕ್ಕೊಮ್ಮೆಯಾದರೂ ಬರಬೇಕು, ಚರಂಡಿಗಳು ಸ್ವಚ್ಚತೆಯಿಲ್ಲದೆ ದುರ್ವಸನೆಯಿಂದ ಕೂಡಿವೆ. ಅದನ್ನು ಸರಿಪಡಿಸುವಂತೆ ಬಡಾವಣೆಗೆ ನಿವಾಸಿಗಳು ಸಚಿವರಿಗೆ ಮನವಿ ಮಾಡಿದರು.
ಜನ-ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಬೇಕು. ಕುಡಿಯುವ ನೀರಿನ ಸಮಸ್ಯೆ, ದೂರುಗಳು ಜನರಿಂದ ಬಾರದಂತೆ ಸೂಕ್ತ ಕ್ರಮ ವಹಿಸಬೇಕು. ಬಡಾವಣೆಗಳು ಸ್ವಚ್ಚತೆಗೆ ಗಮನ ಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭೆ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ಇತರರು ಇದೇ ಸಂದರ್ಭದಲ್ಲಿ ಇದ್ದರು.