ಮೈಸೂರಿನಲ್ಲಿ ಮೊದಲ ಬಾರಿಗೆ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಸಮಗ್ರ ಲೂಪಸ್ ಕ್ಲಿನಿಕ್ ಉದ್ಘಾಟನೆ

ಮೈಸೂರು: ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶ್ವ ಲೂಪಸ್ ದಿನಾಚರಣೆ ಮತ್ತು ಮೈಸೂರಿನಲ್ಲಿ ಮೊದಲ ಬಾರಿಗೆ ಲೂಪಸ್ ಕ್ಲಿನಿಕ್ ಅನ್ನು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ವರ್ಷ ಮೇ ೧೦ರಂದು ಜಾಗತಿಕವಾಗಿ ವಿಶ್ವ ಲೂಪಸ್ ದಿನವನ್ನು ಆಚರಿಸಲಾಗುತ್ತಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ಆದ ಆರೋಗ್ಯಕರ ಅಂಗಾಂಶಗಳ ಮೇಲೆ ಪರಿಣಾಮ ಬೀರುವ ಸಂಕೀರ್ಣ ಸ್ವಯಂ ನಿರೋಧಕ ಕಾಯಿಲೆಯಾದ ಲೂಪಸ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಲೂಪಸ್ ದೀರ್ಘಕಾಲದ ಕಾಯಿಲೆಯಾಗಿದ್ದು ಇದು ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ ಮತ್ತು ಮೆದುಳು ಸೇರಿದಂತೆ ದೇಹದ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದರು.
ಇದನ್ನು ಮನಗಂಡು ಜೆಎಸ್‌ಎಸ್ ಆಸ್ಪತ್ರೆಯ ಚರ್ಮರೋಗ, ನೆಫ್ರಾಲಜಿ ಹಾಗೂ ಕ್ಲಿನಿಕಲ್ ಇಮ್ಯುನೊಲಾಜಿ ಮತ್ತು ರುಮಟಾಲಜಿ ವಿಭಾಗಗಳು ಸೇರಿ ಲೂಪಸ್ ರೋಗಿಗಳ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಮೊದಲ ಬಾರಿಗೆ “ಸಮಗ್ರ ಲೂಪಸ್‌ಕ್ಲಿನಿಕ್” ಅನ್ನು ಪ್ರಾರಂಭಿಸಿದೆ ಎಂದರು.
ಈ ಕ್ಲಿನಿಕ್ ಲೂಪಸ್ ರೋಗಿಗಳಿಗೆ ಒಂದೇ ಸೂರಿನಡಿ ಸುಧಾರಿತ ಚಿಕಿತ್ಸೆ ಮತ್ತು ಸಮಗ್ರ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಹಾಗೂ ಜೆಎಸ್‌ಎಸ್‌ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಲೂಪಸ್ ಹೊರ ರೋಗಿಗಳ ರಕ್ತ ಪರೀಕ್ಷೆಗಳಿಗೆ ಶೇ೧೦% ರಿಯಾಯಿತಿ ಹಾಗೂ ಒಳರೋಗಿಗಳ ಚಿಕಿತ್ಸೆಗಾಗಿ ಶೇ೫% ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದರು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ನಾರಾಯಣಪ್ಪ ಅವರು ಮಾತನಾಡಿ, ಲೂಪಸ್ ಕಾಯಿಲೆಯು ಎಲ್ಲಾ ವಯೋಮಾನದವರೆಗೂ ಬರಬಹುದು. ಇದರ ಲಕ್ಷಣಗಳು ಕೀಲು ನೋವು, ಚರ್ಮದ ದದ್ದುಗಳು, ಜ್ವರ, ಕೂದಲು ಉದುರುವಿಕೆ, ಬಾಯಿ ಹುಣ್ಣುಗಳು, ಮತ್ತು ತೀವ್ರ ಆಯಾಸದಿಂದ ಕೂಡಿರಬಹುದು. ಆರಂಭಿಕ ರೋಗ ನಿರ್ಣಯ ಮತ್ತು ನಿಯಮಿತ ಚಿಕಿತ್ಸೆಯು ತೊಡಕುಗಳನ್ನು ತಡೆಗಟ್ಟಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಕಾಲಿಕ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯಿಂದ ಇದನ್ನು ತಡೆಗಟ್ಟಬಹುದು ಎಂದರು.
ಆಸ್ಪತ್ರೆಯ ಸಂಧಿವಾತ ವಿಭಾಗವು ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವೈದ್ಯರುಗಳು ಎಲ್ಲಾ ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸಲು ಶ್ರಮಿಸುತ್ತಿದ್ದಾರೆ. ಸಂಧಿವಾತ ಸಮಸ್ಯೆಗಳಿಗೆ ಸಮಗ್ರ ಆರೈಕೆಯನ್ನು ನೀಡಲು ವಿಶಾಲವಾದ ಕೊಠಡಿ ಮತ್ತು ಅತ್ಯಾಧುನಿಕ ಉಪಕರಣಗಳೊಂದಿಗೆ ನುರಿತ ವೈದ್ಯರ ತಂಡ ಸಿದ್ಧವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಧಿವಾತ ವಿಭಾಗದ ಮುಖ್ಯಸ್ಥರಾದ ಡಾ.ಸುಬ್ರಮಣಿಯನ್ ಆರ್, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ವೀರಣ್ಣ ಎಸ್, ನೆಪ್ರೋಲಜಿ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್ ಎಸ್‌ಶೆಟ್ಟಿ ಪ್ರಾಧ್ಯಾಪಕರುಗಳಾದ ಡಾ.ಶಿವಪ್ರಸಾದ್, ಡಾ.ಮಹಾಬಲೇಶ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *