- ಮೂರು ವರ್ಷದಲ್ಲಿ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗಾಗಿ 500 ಕೋಟಿ ಅನುದಾನ : ಸಿಎಂ ಅಭಿನಂದನೆ
ಚಾಮರಾಜನಗರ: ರಾಜ್ಯ ಸರ್ಕಾರಕ್ಕೆ ಮೇ.20ಕ್ಕೆ 3 ವರ್ಷಗಳ ಪೂರೈಸಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ 500 ಕೋಟಿಗೂ ಹೆಚ್ಚು ಅನುದಾನ ತರಲಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಅಯೋಜಿಸಿದ ಸಂವಾದದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಅದಕ್ಕಾಗಿ ಮುಖ್ಯಮಂತ್ರಿ ಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಮೂರು ತಾಲೂಕುಗಳು ಒಳಪಡುತ್ತದೆ. ಯಳಂದೂರು ಪಟ್ಟಣದಲ್ಲಿ 33 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಆಗಸ್ಟ್‌ನಲ್ಲಿ ಉದ್ಘಾಟನೆಯಾಗಲಿದೆ. ಅಲ್ಲದೇ ಕೊಳ್ಳೇಗಾಲದ ಮುಡಿಗುಂಡದಲ್ಲಿ 48 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಆಗಿದೆ ಎಂದರು.
15 ಕೋಟಿ ವೆಚ್ಚದಲ್ಲಿ ಮುಡಿಗುಂಡ ಸೇತುವೆ 2ವೇ ನಿರ್ಮಾಣ, ಸಣ್ಣ ನೀರಾವರಿ ಇಲಾಖೆಯಿಂದ 14.5 ಕೋಟಿ ವೆಚ್ಚದಲ್ಲಿ ಹೊಂಗನೂರು ಹಿರಿಕೆರೆ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರದಲ್ಲಿ ರೇಷ್ಮೆ ಉತ್ತೇಜನಕ್ಕೆ 15 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಬಳಿ 3 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ, ಸಂತೇಮಹರಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ 5 ಕೋಟಿ ವೆಚ್ಚದಲ್ಲಿ ಎಳನೀರು ಮಾರುಕಟ್ಟೆ ನಿರ್ಮಾಣ, ಯಳಂದೂರು ತಾಲೂಕಿನ ಗೌಡಹಳ್ಳಿ, ಚಾಮರಾಜನಗರ ತಾಲೂಕಿನ ಕುದೇರು, ಗೂಳಿಪುರ ಗ್ರಾಮಗಳಲ್ಲಿ ಪಶು ಆಸ್ಪತ್ರೆ ಮಂಜೂರಾಗಿದೆ .
ಯಳಂದೂರು ಪಟ್ಟಣದಲ್ಲಿ 2.5 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ವಾಣ, ಸಂತೇಮರಹಳ್ಳಿ ಯಲ್ಲಿ ಆರ್ಚರಿ ಶಾಲೆಯ ಅಭಿವೃದ್ಧಿಗೆ 2 ಕೋಟಿ ಮಂಜೂರಾಗಿದೆ. ಬಿಳಿಗಿರಿರಂಗನಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ, ಕಮರಿ ಅಭಿವೃದ್ಧಿ, ದಾಸೋಹ ಭವನ ನಿರ್ಮಾಣಕ್ಕೆ 5.45 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಂದು ಹೇಳಿದರು.
ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ, ಚಿಲಕವಾಡಿಯಲ್ಲಿ ವೇ ಬ್ರಿಡ್ಜ್ ನಿರ್ಮಾಣ, ಕುದೇರು ಬಳಿ ಇರುವ ವಿವೇಕಾನಂದ ಕಾಲೋನಿ ಬಳಿ 4.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ, ಮೂಡಲ ಅಗ್ರಹಾರದಲ್ಲಿ 4.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ, ಕಾವುದವಾಡಿ ಬಳಿ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ರೇಚಂಬಳ್ಳಿ, ಕುರುಬರಹುಂಡಿಯಲ್ಲಿ ರಸ್ತೆ ಅಭಿವೃದ್ಧಿ, ಆಲೂರು-ಹೊಮ್ಮೆ ರಸ್ತೆ ಅಭಿವೃದ್ಧಿಗೆ ಚಾಲನೆ, 50 ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಅಲ್ಪಸಂಖ್ಯಾತರ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ,ಸಮುದಾಯ ಭವನಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಕೆರೆ ತುಂಬಿಸುವ ಯೋಜನೆ, ಸಿಲ್ಕ್ ಪಾರ್ಕ್ ನಿರ್ಮಾಣ, ಶ್ರಮಿಕ ವಸತಿ ಶಾಲೆ ನಿರ್ಮಾಣ, ಜವಳಿ ಪಾರ್ಕ್ ನಿರ್ಮಾಣ, ಸಂತೇಮರಹಳ್ಳಿಗೆ ಬಸ್ ಡಿಪೋ, ಬಸ್ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ನೀರು ನುಗ್ಗುವ ಗ್ರಾಮಗಳಲ್ಲಿ ತಡೆಗೋಡೆ ನಿಮಾಣ, ಯಳಂದೂರು ಪಟ್ಟಣಕ್ಕೆ ನೀರು ಪೂರೈಕೆ ಹಾಗೂ ಒಳಚರಂಡಿ ನಿರ್ಮಾಣ, ಕೊಳ್ಳೇಗಾಲದಲ್ಲಿ ಒಳ ಚರಂಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಹೆಚ್ಚುವರಿ ಕೆಪಿಎಸ್ ಶಾಲೆ ನಿರ್ಮಾಣ. ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 500 ಕೋಟಿಗೂ ಹೆಚ್ಚು ಅನುದಾನವನ್ನು ತರಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸಂವಾದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಎಸ್.
ಪ್ರಸಾದ್, ಪತ್ರಕರ್ತರು ಹಾಜರಿದ್ದರು.