- ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧನೆ
- ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್
- ನ್ಯಾಯಾಲಯದಿಂದ ಹೊರಬಂದ ನ್ಯಾಯಾಧೀಶರು, ವಕೀಲರು
ಚಾಮರಾಜನಗರ:ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹುಸಿಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು, ಬಾಂಬ್ ನಿಗ್ರಹ ದಳ ಹಾಗೂ ಶ್ವಾನದಳದಿಂದ ವ್ಯಾಪಕ ತಪಾಸಣೆ ನಡೆಸಲಾಯಿತು.
ನ್ಯಾಯಾಲಯದ ಅಧಿಕಾರಿಗಳ ಗಮನಕ್ಕೆ ಬೆದರಿಕೆ ಇ-ಮೇಲ್ ಬಂದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ
ಜಿಲ್ಲಾ ಪೊಲೀಸರು, ಬಾಂಬ್ ನಿಗ್ರಹ ದಳ ಮತ್ತು ಶ್ವಾನದಳದ ಸಿಬ್ಬಂದಿ ನ್ಯಾಯಾಲಯದ ಕಟ್ಟಡಕ್ಕೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯದ ಆವರಣಕ್ಕೆ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಇದರಿಂದ ನ್ಯಾಯಾಲಯದ ಕಾರ್ಯಚಟುವಟಿಕೆಗಳ ಮೇಲೂ ಕೆಲಕಾಲ ಪರಿಣಾಮ ಬೀರಿತು.