ಹನೂರು: ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬರ ವೀಕ್ಷಣೆಗೆ ಹನೂರು ತಾಲೂಕಿಗೆ ಆಗಮಿಸಿದ್ದ ವೇಳೆ ರಾಮಾಪುರ ಕೇಂದ್ರಕ್ಕೆ ಭೇಟಿ ನೀಡಲಿಲ್ಲ ಎಂದು ಆರೋಪಿಸಿ ರೈತ ಸಂಘದ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಅತ್ಯಂತ ಬರಪೀಡಿತ ಪ್ರದೇಶವಾಗಿರುವ ರಾಮಾಪುರ ಭಾಗಕ್ಕೆ ಡಿಸಿಎಂ ಅವರು ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಬೇಕು ಎಂದು ರೈತರು ಒತ್ತಾಯಿಸಿದರು.
ನಿಗದಿತ ಕಾರ್ಯಕ್ರಮದಂತೆ ಅಜ್ಜೀಪುರ, ದಾಸನದೊಡ್ಡಿ, ರಾಮಾಪುರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಹನೂರು ಮತ್ತು ಅಜ್ಜೀಪುರ ಗ್ರಾಮಕ್ಕೆ ಮಾತ್ರ ಭೇಟಿ ನೀಡಿ ವಾಪಸ್ ತೆರಳಿದ್ದರಿಂದ ಆಕ್ರೋಶಗೊಂಡ ರೈತ ಸಂಘದ ಮುಖಂಡರು ರಾಮಪುರದಲ್ಲಿ ರಸ್ತೆ ತಡೆ ನಡೆಸಿದರು.
ಈ ಭಾಗದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದೆ. ನಾವು ಸಚಿವರಿಗೆ ಮನವಿ ನೀಡಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಲು ಕಾಯುತ್ತಿದ್ದೆವು. ಆದರೆ ಸಚಿವರು ನಮ್ಮ ಗ್ರಾಮಕ್ಕೆ ಬಾರದೆ ನಿರ್ಲಕ್ಷ್ಯ ಮಾಡಿ ವಾಪಸ್ ತೆರಳಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.
