ಬೆಂಗಳೂರು: ಮೈಸೂರು ಸಿನಿ ಟಾಕೀಸ್ ಲಾಂಛನದಲ್ಲಿ “ಶ್ರೀ ವಿಠಲನಾಮ” ಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಬೆಂಗಳೂರಿನ ಮಾಗಡಿ ರಸ್ತೆಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೆರವೇರುವುದರ ಜೊತೆಗೆ ಭರದಿಂದ ಚಿತ್ರೀಕರಣ ಸಾಗಿದೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರು, ಹಿರಿಯ ಚಿತ್ರರಂಗದ ಕಲಾವಿದರಾದ ಗಣೇಶರಾವ್ ಕೇಸರ್ಕರ್ ಕ್ಲಾಪ್ ಮಾಡುವ ಮೂಲಕ ಹೊಸ ಚಲನಚಿತ್ರಕ್ಕೆ ಚಾಲನೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರ ತಂಡದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.
ಸು.1270—1350ರ ಮಧ್ಯಕಾಲೀನ ಭಾರತದ ಭಕ್ತಿ ಪಂಥದ ಕವಿ, ಸಂತರು, ವಾರಿಕರಿ ಸಂಪ್ರದಾಯದ ಪ್ರಮುಖ ಪ್ರವರ್ತಕರು, ಪಂಢರಪುರದ ವಿಠ್ಠಲ(ಪಾಂಡುರಂಗ)ನ ಪರಮ ಭಕ್ತರಾಗಿ ಕೀರ್ತನೆ ಮತ್ತು ಅಭಂಗಗಳ ಮೂಲಕ ಭಕ್ತಿಯ ಜೊತೆ ಸಮಾನತೆಯ ಸಂದೇಶ ಜಗತ್ತಿಗೆ ಸಾರಿದ ಮಹಾನ್ ಸಂತ ನಾಮದೇವನ ಐತಿಹಾಸಿಕ ಕಥಾ ಹಂದರ ಚಿತ್ರದಲ್ಲಿದ್ದು, ಈ ಕಾಲಘಟ್ಟಕ್ಕೂ
ಕರ್ನಾಟಕ- ಮಹಾರಾಷ್ಟ್ರದ ಸಂಬಂಧವನ್ನು ಬೆಸೆಯುವ ಕಥೆ ಇದಾಗಿದೆ. ಐದು ಹಾಡುಗಳು ಚಿತ್ರದಲ್ಲಿದ್ದು ಮಾಗಡಿ ಸುತ್ತಮುತ್ತ, ವಿಜಯಪುರ, ಪಂಢರಪುರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಎಸ್.ಕೆ.ಶ್ರೀನಿವಾಸ್ ಹೇಳಿದರು.
ಮುಖ್ಯ ಭೂಮಿಕೆಯಲ್ಲಿ ವಿಜಯಾನಂದ ನಾಯಕ್, ಗಣೇಶರಾವ್ ಕೇಸರ್ಕರ್, ಏನ್ ಟಿ ರಾಮಸ್ವಾಮಿ, ಪದ್ಮಕಲಾ, ವೀರೇಂದ್ರ ಬೆಳ್ಳಿಚುಕ್ಕಿ, ಪಾಂಡುರಂಗ ಚಾರ್, ತೇಜಸ್ವಿನಿ, ರಾಜೇಶ್ವರಿ, ಅಂಬಾದಾಸ್ ಜೋಶಿ, ಮೊದಲಾದವರಿದ್ದಾರೆ.
ಛಾಯಾಗ್ರಹಣ ನಾರಾಯಣ್, ಸಂಗೀತ ಡಾ. ರಾಮಾನುಜಂ. ಕಲೆ ಪದ್ಮಕಲಾ, ಸಂಕಲನ ಹರೀಶ್ ಬೈರಾಪಟ್ಟಣ, ಪ್ರಸಾಧನ ಮಣಿ, ವಸ್ತ್ರ ವಿನ್ಯಾಸ ಬೆಳ್ಳಿಚುಕ್ಕಿ ವೀರೇಂದ್ರ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ.
ಹಿರಿಯ ನಿರ್ದೇಶಕರಾದ ಎಸ್ ಕೆ ಶ್ರೀನಿವಾಸ್ ಪರಿಕಲ್ಪನೆ, ಸಂಭಾಷಣೆ ಜೊತೆಗೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಟಿ ಎನ್ ವೆಂಕಟೇಶ್ ಮೈಸೂರು ಬಂಡವಾಳ ಹಾಕಿದ್ದು, ಸಹ ನಿರ್ಮಾಪಕರಾಗಿ ಹೇಮಾದ್ರಿ ಬಾಯೀ ಕೈಜೊಡಿಸಿದ್ದಾರೆ.
**ಡಾ.ಪ್ರಭು ಗಂಜಿಹಾಳ
ಮೊ-೯೪೪೮೭೭೫೩೪೬
