ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಇಂದಿನ ಮಕ್ಕಳು, ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸುವ ಮೂಲಕ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

   ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಜನ್ಮದಿನದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ಉತ್ತಮ ಕ್ರೀಡಾಪಟುವಾಗಿದ್ದು, ಧ್ಯಾನ್‍ಚಂದ್ ಕ್ರೀಡಾಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರಿನಲ್ಲಿ ಸರ್ಕಾರವು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಧ್ಯಾನ್‍ಚಂದ್ ಮಾದರಿಯ ಕ್ರೀಡಾಪಟುಗಳನ್ನು ಜಿಲ್ಲೆಯಲ್ಲಿಯು ಹುಟ್ಟುಹಾಕಬೇಕಿದೆ. ಇಂದಿನ ಮಕ್ಕಳು ಮೇಜರ್ ಧ್ಯಾನ್‍ಚಂದ್ ಅವರನ್ನು ಮಾದರಿಯಾಗಿಸಿಕೊಳ್ಳಬೇಕಿದೆ. ಸರ್ಕಾರವು ಸಹ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಚಿವರು ತಿಳಿಸಿದರು.


ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸುಸ್ಥಿತಿ ಕಾಪಾಡಿಕೊಳ್ಳಬಹುದು. ಜಿಲ್ಲೆಯ ಮಕ್ಕಳು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಲು ಪೋಷಕರು, ಶಿಕ್ಷಕರು ಪ್ರೇರೇಪಿಸಬೇಕು. ಆ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು. ಇದಕ್ಕೆ ಪೂರಕವಾಗಿ ಜಿಲ್ಲೆಯ ಮಕ್ಕಳನ್ನು ಕ್ರೀಡೆಗಳತ್ತ ಸೆಳೆಯಲು ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕ್ರೀಡಾ ಇಲಾಖೆಯ ತರಬೇತುದಾರ ಗಣೇಶ್ ಅವರು ಮೇಜರ್ ಧ್ಯಾನ್‍ಚಂದ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತರಪ್ರದೇಶದ ಅಲಹಾಬಾದ್‍ನಲ್ಲಿ 1905ರಲ್ಲಿ ಜನಿಸಿದ ಧ್ಯಾನ್‍ಚಂದ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದರು. ಆರಂಭದಲ್ಲಿ ಕುಸ್ತಿ ಬಗ್ಗೆ ಒಲವು ಹೊಂದಿದ್ದ ಅವರು ಸೈನ್ಯಕ್ಕೆ ಸೇರಿದ ಬಳಿಕ ಹಾಕಿಯತ್ತ ಮುಖಮಾಡಿದರು. ಹಾಕಿ ಬಗ್ಗೆ ಅವರಿಗಿದ್ದ ಪ್ರೀತಿ, ಪರಿಶ್ರಮ ಅವರನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಿತು. 1928 ವಿಶ್ವದ ಕ್ರೀಡಾಕ್ಷೇತ್ರದಲ್ಲಿ ಭವ್ಯಭಾರತದ ಸುವರ್ಣಯುಗವಾಗಿದೆ. ಭಾರತವು ಒಲಂಪಿಕ್ಸ್‍ನಲ್ಲಿ ಮೂರು ಬಾರಿ (1928, 1932 ಹಾಗೂ 1936) ಚಿನ್ನ ಗೆದ್ದ ಹ್ಯಾಟ್ರಿಕ್ ಸಾಧನೆಗೆ ಧ್ಯಾನ್‍ಚಂದ್ ಕಾಣಿಕೆ ಅಪಾರವಾಗಿದೆ ಎಂದರು.

ಹಾಕಿ ಕ್ರೀಡೆಯಲ್ಲಿ ಉತ್ಕøಷ್ಟ ಶೈಲಿ ರೂಢಿಸಿಕೊಂಡಿದ್ದ ಮೇಜರ್ ಧ್ಯಾನ್‍ಚಂದ್ ಅವರು ಭಾರತದ ಪರ ಸಾವಿರ ಗೋಲು ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ 400ಕ್ಕೂ ಹೆಚ್ಚು ಗೋಲು ಹೊಡೆದಿದ್ದಾರೆ. ಧ್ಯಾನ್ ಚಂದ್ ಅವರ ಕೊಡುಗೆಯನ್ನು ಪರಿಗಣಿಸಿ ಸರ್ಕಾರವು ಪದ್ಮಭೂಷಣ ಹಾಗೂ ಖೇಲ್‍ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರತಿವರ್ಷ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಧ್ಯಾನ್‍ಚಂದ್ ಹೆಸರಿನಲ್ಲಿ ಖೇಲ್‍ರತ್ನ ಪ್ರಶಸ್ತಿಯನ್ನು ನೀಡುತ್ತಿರುವುದು ಸ್ಮರಣೀಯವಾಗಿದೆ. ಮೇಜರ್ ಧ್ಯಾನ್‍ಚಂದ್ ಅವರ ಕ್ರೀಡಾಸ್ಪೂರ್ತಿ, ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಗಣೇಶ್ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಎಸ್. ಬಿಂಧ್ಯಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್, ಮುಖಂಡರಾದ ಉಮೇಶ್, ಶ್ರೀನಿವಾಸಮೂರ್ತಿ, ಎಂ. ಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ವೇದಿಕೆ ಕಾರ್ಯಕ್ರಮದ ಬಳಿಕ 5 ಕಿ.ಮೀ ರಸ್ತೆ ಓಟ (ಮ್ಯಾರಥಾನ್), ಸ್ಕೇಟಿಂಗ್ ಮತ್ತು ಹಗ್ಗ-ಜಗ್ಗಾಟ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿ ಹಸಿರು ನಿಶಾನೆ ತೋರಿದರು.

ಮ್ಯಾರಥಾನ್ ಸ್ಪರ್ಧೆಯು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭವಾಗಿ ಜೋಡಿರಸ್ತೆ ಮೂಲಕ ರಾಮಸಮುದ್ರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ವಾಪಸ್ಸು ತಿರುಗಿ ಮತ್ತೆ ಚಾಮರಾಜೇಶ್ವರ ದೇವಾಲಯದಲ್ಲಿ ಅಂತ್ಯವಾಯಿತು. ಸ್ಕೇಟಿಂಗ್ ಸ್ಪರ್ಧೆಯು ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭವಾಗಿ ನಗರದ ಡಿ.ವೈ.ಎಸ್.ಪಿ ಕಚೇರಿವರೆಗೆ ಹಾಗೂ ಅಲ್ಲಿಂದ ಹಿಂತಿರುಗಿ ಚಾಮರಾಜೇಶ್ವರ ದೇವಾಲಯದಲ್ಲಿ ಮುಕ್ತಾಯವಾಯಿತು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.

ರಸ್ತೆ ಓಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕೃಷ್ಣ ಮೇಗಲಹುಂಡಿ ಪ್ರಥಮ, ಪ್ರೀತಮ್ ಮೇಗಲಹುಂಡಿ ದ್ವಿತೀಯ ಹಾಗೂ ಮನು ಕಣ್ಣೇಗಾಲ ಅವರು ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕೊಳ್ಳೇಗಾಲ ತಾಲೂಕಿನ ತೆಳ್ಳನೂರಿನ ಬಿ.ಆರ್. ಪ್ರೀತಿ ಪ್ರಥಮ, ಪ್ರಭಾವತಿ ತೃತೀಯ ಮತ್ತು ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿಯ ದೀಪು ದ್ವಿತೀಯ ಸ್ಥಾನಿಗಳಾದರು. ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರದ ಜಾಯಿದ್ ಪ್ರಥಮ, ಅರಬಸ್ ಖಾನ್ ದ್ವಿತೀಯ ಹಾಗೂ ಸೈಯ್ಯದ್ ತಾಹೀರ್ ತೃತೀಯ ಸ್ಥಾನ ಪಡೆದರು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಡಿ.ಎ.ಆರ್ ಪೊಲೀಸ್ ತಂಡ ಪ್ರಥಮ ಹಾಗೂ ಸೇವಭಾರತಿ ಪದವಿಪೂರ್ವ ಕಾಲೇಜು ದ್ವಿತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಹಾಗೂ ಜೆ.ಎಸ್.ಎಸ್. ನರ್ಸಿಂಗ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

Leave a Reply

Your email address will not be published. Required fields are marked *