ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಂದ ಚಾಮರಾಜನಗರ ರೈಲು ನಿಲ್ದಾಣ ಅಭಿವೃದ್ದಿ ಕಾಮಗಾರಿ ಪರಿಶೀಲನೆ

ಚಾಮರಾಜನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ಚಾಮರಾಜನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 22.31 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿರುವ ರೈಲು ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದರು. 

ಹೊಸ ನಿಲ್ದಾಣ ಕಟ್ಟಡ, ಅಗಲೀಕರಣ ಮಾಡುತ್ತಿರುವ ಫ್ಲಾಟ್ ಫಾರಂ, ಶೆಲ್ಟರ್, ಪ್ರಯಾಣಿಕರ ಸಂಚಾರಕ್ಕೆ ನಿರ್ಮಿಸಲಾಗುತ್ತಿರುವ ಪಾದಚಾರಿ ಮೇಲ್ಸೆತುವೆ, ಲಿಫ್ಟ್ ಗಳು, ಎಸ್ಕಲೇಟರ್ ಕಾಮಗಾರಿಗಳನ್ನು ವೀಕ್ಷಿಸಿದರು.

ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ನಿರೀಕ್ಷಣಾ ಕೊಠಡಿ, ಉಪಹಾರ ಮಂದಿರವನ್ನು ವೀಕ್ಷಣೆ ಮಾಡಿದರು. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ, ಪಾರ್ಕಿಂಗ್ ಸ್ಥಳ, ಸುಧಾರಿತ ಪ್ರದೇಶ ಸೌಲಭ್ಯ ಸೇರಿದಂತೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.

ಹಾಲಿ ಇರುವ ಟಿಕೆಟ್ ಕೌಂಟರ್ ಬಳಿ ತೆರಳಿ ಅಲ್ಲಿಯೂ ವೀಕ್ಷಣೆ ಮಾಡಿ ಪ್ರಯಾಣಿಕರಿಗೆ ಶೀಘ್ರವಾಗಿ ಟಿಕೆಟ್ ವಿತರಿಸಲು ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಿದರು. ಇದೇ ವೇಳೆ ರೈಲ್ವೆ ಸೌಲಭ್ಯಗಳ ಬಗ್ಗೆ ಪ್ರಯಾಣಿಕರಿಂದಲೂ ಅಹವಾಲುಗಳನ್ನು ಆಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರಾದ ವಿ. ಸೋಮಣ್ಣ ಅವರು ಇಡೀ ರಾಜ್ಯದಲ್ಲಿ ರೈಲ್ವೆ ಮೇಲ್ಸೆತುವೆ, ಕೆಳ ಸೇತುವೆ ಸೇರಿದಂತೆ ನೆನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುತ್ತಿದ್ದೇವೆ. ಪ್ರಧಾನಿಯವರು ತಂದಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ತಾಲೂಕುಗಳು, ರಾಜಧಾನಿಯಲ್ಲಿರುವ ರೈಲು ನಿಲ್ದಾಣವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದರಲ್ಲಿ ಚಾಮರಾಜನಗರ ರೈಲು ನಿಲ್ಧಾಣದಲ್ಲಿಯೂ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸೆಪ್ಟೆಂಬರ್ 26ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಿದ್ದೇವೆ ಎಂದರು.

ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಭಾಗದಲ್ಲಿ ಮೇಲ್ಸೆತುವೆ, ಕೆಳ ಸೇತುವೆ, ಎಲ್.ಸಿ ಗೇಟ್ ಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿಯಾಗಿದೆ. ಅಧಿಕಾರಿಗಳೊಂದಿಗೆ ಈಗಾಗಲೇ ವೀಕ್ಷಿಸಿ ಚರ್ಚಿಸಲಾಗಿದೆ. ಇನ್ನು 15 ದಿನದೊಳಗೆ ಯೋಜನೆ ಯಾವ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಇನ್ನೂ 2 ವರ್ಷದಲ್ಲಿ ಎಲ್ಲವನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿಪ್ ಮಿತ್ತಲ್, ಮುಖ್ಯ ಯೋಜನಾ ವ್ಯವಸ್ಥಾಪಕರಾದ ಗತಿಶಕ್ತಿ, ಮುಖ್ಯ ಯೋಜನಾ ವ್ಯವಸ್ಥಾಪಕರಾದ ಆನಂದ ಭಾರತಿ ಹಾಗೂ ಇಲಾಖೆಯ ವಿಭಾಗೀಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *